ದೇಶ

ಟಿಎಂಸಿ ರಾಷ್ಟ್ರೀಯ ವಕ್ತಾರರಾಗಿ ಬಬುಲ್ ಸುಪ್ರಿಯೊ ನೇಮಕ

Lingaraj Badiger

ಕೊಲ್ಕತಾ: ತೃಣಮೂಲ ಕಾಂಗ್ರೆಸ್(ಟಿಎಂಸಿ) ಶಾಸಕ ಬಬುಲ್ ಸುಪ್ರಿಯೊ ಅವರನ್ನು ಪಕ್ಷದ ರಾಷ್ಟ್ರೀಯ ವಕ್ತಾರರನ್ನಾಗಿ ನೇಮಿಸಲಾಗಿದೆ. ತನಗೆ ಹೊಸ ಜವಾಬ್ದಾರಿ ನೀಡಿದ್ದಕ್ಕಾಗಿ ಪಕ್ಷದ ವರಿಷ್ಠರಿಗೆ ಮಾಜಿ ಕೇಂದ್ರ ಸಚಿವ ಬಬುಲ್ ಸುಪ್ರಿಯೊ ಅವರು ಟ್ವಿಟರ್‌ನಲ್ಲಿ ಧನ್ಯವಾದ ತಿಳಿಸಿದ್ದಾರೆ.

ಟಿಎಂಸಿಯ ರಾಷ್ಟ್ರೀಯ ವಕ್ತಾರರ ಸುಪ್ರಸಿದ್ಧ ತಂಡದಲ್ಲಿ ನನ್ನನ್ನು ನೇಮಿಸಿದ್ದಕ್ಕಾಗಿ/ಸೇರಿಸಿದ್ದಕ್ಕಾಗಿ ಗೌರವಾನ್ವಿತ ದೀದಿ ಅವರಿಗೆ ನನ್ನ ಪ್ರಾಮಾಣಿಕ ಕೃತಜ್ಞತೆಗಳು. ನನಗೆ ವಹಿಸಿದ ಜವಾಬ್ದಾರಿಯನ್ನು ನಿಭಾಯಿಸಲು ನನ್ನ ಕೈಲಾದಷ್ಟು ಪ್ರಯತ್ನಿಸುತ್ತೇನೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಬಬುಲ್ ಸುಪ್ರಿಯೊ ಅವರನ್ನು ರಾಷ್ಟ್ರೀಯ ವಕ್ತಾರರನ್ನಾಗಿ ನೇಮಿಸಿರುವುದು ಬಂಗಾಳದ ಹೊರಗೆ ತನ್ನ ನೆಲೆಯನ್ನು ವಿಸ್ತರಿಸಲು ಪಕ್ಷವು ರೂಪಿಸಿದ ಕಾರ್ಯತಂತ್ರದ ಒಂದು ಭಾಗವಾಗಿದೆ ಎಂದು ಟಿಎಂಸಿ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.

ಬಬುಲ್ ಸುಪ್ರಿಯೊ ಗಾಯಕ ಮತ್ತು ರಾಜಕಾರಣಿಯಾಗಿ ದೇಶಾದ್ಯಂತ ಚಿರಪರಿಚಿತ ಮುಖವಾಗಿದ್ದಾರೆ. ಆದ್ದರಿಂದ ಅವರು ನಮ್ಮ ಅಭಿಪ್ರಾಯಗಳು ಮತ್ತು ನೀತಿಗಳನ್ನು ರಾಷ್ಟ್ರೀಯ ವೇದಿಕೆಯಲ್ಲಿ ಇರಿಸಲು ನಮಗೆ ಸಹಾಯ ಮಾಡಬಹುದು ಎಂದು ಟಿಎಂಸಿ ನಾಯಕರು ತಿಳಿಸಿದ್ದಾರೆ.

ಬಬುಲ್ ಸುಪ್ರಿಯೊ ಅವರನ್ನು ಕಳೆದ ವರ್ಷ ಕೇಂದ್ರ ಸಚಿವಾಲಯದಿಂದ ಕೈಬಿಟ್ಟ ನಂತರ ಅವರು ಟಿಎಂಸಿಗೆ ಸೇರ್ಪಡೆಯಾದರು. ಎರಡು ಬಾರಿ ಬಿಜೆಪಿ ಟಿಕೆಟ್‌ನಲ್ಲಿ ಗೆದ್ದಿದ್ದ ಅಸನ್ಸೋಲ್ ಲೋಕಸಭಾ ಸ್ಥಾನವನ್ನು ತ್ಯಜಿಸಿದರು.

ಈ ವರ್ಷದ ಏಪ್ರಿಲ್‌ನಲ್ಲಿ ನಡೆದ ಬ್ಯಾಲಿಗುಂಜ್ ವಿಧಾನಸಭಾ ಉಪಚುನಾವಣೆಯಲ್ಲಿ ಟಿಎಂಸಿಯಿಂದ ಆರಾಮಾದಾಯಕ ಅಂತರದಿಂದ ಬಬುಲ್ ಸುಪ್ರಿಯೊ ಗೆಲುವು ದಾಖಲಿಸಿದರು.

SCROLL FOR NEXT