ದೇಶ

ಅಮರನಾಥ ಯಾತ್ರೆ ಪುನರಾರಂಭ: ಮೊಳಗಿದ 'ಬಂ ಬಂ ಭೋಲೆ'!

Nagaraja AB

ಜಮ್ಮು: ಜಮ್ಮುವಿನ ಭಗವತಿ ನಗರದಲ್ಲಿರುವ ಯಾತ್ರಿ ನಿವಾಸ ಬೇಸ್ ಕ್ಯಾಂಪ್ ನಿಂದ ಅಮರನಾಥ ಯಾತ್ರೆ ಪುನರಾರಂಭಗೊಂಡಿದೆ. ಶುಕ್ರವಾರ ಸಂಜೆ ಅಮರನಾಥ ಗುಹೆ ಬಳಿ ಭಾರೀ ವರ್ಷಧಾರೆಯಿಂದಾಗಿ ತಾತ್ಕಾಲಿಕವಾಗಿ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿತ್ತು.

ಮಳೆ ಆರ್ಭಟದಿಂದಾಗಿ ಉಂಟಾದ ಪ್ರವಾಹದಿಂದ 16 ಜನರು ಸಾವಿಗೀಡಾಗಿದ್ದರು. ಇದೇ ಸಂದರ್ಭದಲ್ಲಿ 40 ಮಂದಿ ಕಾಣೆಯಾಗಿದ್ದು, ಸುಮಾರು 50 ಮಂದಿ ಗಾಯಗೊಂಡಿದ್ದಾರೆ. ಅಮರನಾಥದಲ್ಲಿ ಈ ಅನಾಹುತ ಸಂಭವಿಸಿದ್ದರೂ  ಯಾತ್ರಾರ್ಥಿಗಳ ಉತ್ಸಾಹ ಸ್ವಲ್ಪವೂ ಕಡಿಮೆಯಾಗಿಲ್ಲ.' ಬಂ ಬಂ ಭೋಲೆ' ಎಂಬ ಘೋಷಣೆಗಳೊಂದಿಗೆ ಭಕ್ತರಿಗಾಗಿ ಸರ್ಕಾರ ಸ್ಥಾಪಿಸಿರುವ ಬೇಸ್ ಕ್ಯಾಂಪ್ ಗಳತ್ತ ದಾಪು ಗಾಲು ಹಾಕುತ್ತಿದ್ದಾರೆ.

4,026 ಯಾತ್ರಾರ್ಥಿಗಳ 12ನೇ ಬ್ಯಾಚ್ 110 ವಾಹನಗಳ ಬೆಂಗಾವಲಿನೊಂದಿಗೆ ಶಿಬಿರದಿಂದ ರವಾನೆಯಾಗಿದ್ದಾರೆ. ಇನ್ನು 767 ಪುರುಷರು, 240 ಮಹಿಳೆಯರು ಮತ್ತು ಒಂಬತ್ತು ಮಕ್ಕಳು ಸೇರಿದಂತೆ ಒಟ್ಟು 1,016 ಪ್ರಯಾಣಿಕರು ಬೇಸ್ ಕ್ಯಾಂಪ್ ನಿಂದ 25 ಬಸ್ ಗಳು ಮತ್ತು 10 ಲಘು ಮೋಟಾರು ವಾಹನಗಳಲ್ಲಿ ಬಾಲ್ಟಾಲ್ ಮಾರ್ಗಕ್ಕೆ ತೆರಳಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದರಂತೆ ಪಹಲ್ಗಾಮ್ ಮಾರ್ಗಕ್ಕಾಗಿ 2,425 ಪುರುಷರು, 401 ಮಹಿಳೆಯರು, ನಾಲ್ವರು ಮಕ್ಕಳು, 174 ಸಾಧುಗಳು ಮತ್ತು ಆರು ಸಾದ್ವಿಗಳು ಸೇರಿದಂತೆ 58 ಬಸ್ ಗಳು ಸೇರಿದಂತೆ ಒಟ್ಟು 3,010 ಯಾತ್ರಿಕರು 75 ವಾಹನಗಳಲ್ಲಿ ಬೇಸ್ ಕ್ಯಾಂಪ್ ನಿಂದ ಹೊರಟ್ಟಿದ್ದಾರೆ. ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ಜಮ್ಮು ಮೂಲ ಶಿಬಿರದಿಂದ ಇದುವರೆಗೆ 73,554 ಯಾತ್ರಿಕರು ಪವಿತ್ರ ಗುಹೆಗೆ ಭೇಟಿ ನೀಡಲು ತೆರಳಿದ್ದಾರೆ.

SCROLL FOR NEXT