ದೇಶ

ಪೊಲೀಸ್ ಕಸ್ಟಡಿಗೆ ನೀಡಲು ಲಖಿಂಪುರ ಖೇರಿ ಕೋರ್ಟ್ ನಕಾರ; ಮೊಹಮ್ಮದ್ ಜುಬೇರ್ ಗೆ 14 ದಿನ ನ್ಯಾಯಾಂಗ ಬಂಧನ

Lingaraj Badiger

ಲಖಿಂಪುರ: ಉತ್ತರ ಪ್ರದೇಶದ ಲಖಿಂಪುರ ಖೇರಿ ನ್ಯಾಯಾಲಯವು ಸೋಮವಾರ ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮೊಹಮ್ಮದ್ ಜುಬೇರ್ ಅವರನ್ನು ಪೊಲೀಸ್ ಕಸ್ಟಡಿಗೆ ನೀಡಲು ನಿರಾಕರಿಸಿದೆ. ಬದಲಿಗೆ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಅವರ ವಿರುದ್ಧ ದಾಖಲಾಗಿದ್ದ ಪ್ರಕರಣದಲ್ಲಿ ಉತ್ತರ ಪ್ರದೇಶದ ಲಖಿಂಪುರ ಪೊಲೀಸರು ಜುಬೈರ್ ಅವರಿಗೆ ಸಮನ್ಸ್ ನೀಡಿದ್ದರು.

ಈ ಪ್ರಕರಣದಲ್ಲಿ ಜುಬೇರ್ ಜುಲೈ 25 ರವರೆಗೆ ಸೀತಾಪುರ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿ ಇರಲಿದ್ದಾರೆ. ನ್ಯಾಯಾಲಯವು ಜುಲೈ 13 ರಂದು ಅವರ ಜಾಮೀನು ಅರ್ಜಿಯನ್ನು ಆಲಿಸಲಿದೆ. ಇಂದು ವಿಡಿಯೊ ಕಾನ್ಫರೆನ್ಸಿಂಗ್ ಮೂಲಕ ಮೊಹಮ್ಮದ್ ಜುಬೈರ್ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

ಖಾಸಗಿ ಸುದ್ದಿ ವಾಹಿನಿಯೊಂದರ ವಿರುದ್ಧ ಟ್ವೀಟ್ ಮಾಡಿದ್ದಕ್ಕಾಗಿ ಸೆಪ್ಟೆಂಬರ್ 2021ರಲ್ಲಿ ಜುಬೈರ್ ವಿರುದ್ಧ ಲಖಿಂಪುರದಲ್ಲಿ ಪ್ರಕರಣ ದಾಖಲಿಸಲಾಗಿದೆ. ಮೇ 14, 2021 ರಂದು ಜುಬೇರ್ ಮಾಡಿದ ಟ್ವೀಟ್‌ಗಾಗಿ ಸುದರ್ಶನ್ ನ್ಯೂಸ್ ಉದ್ಯೋಗಿಯೊಬ್ಬರು ದೂರು ದಾಖಲಿಸಿದ್ದರು. ಜುಬೈರ್ ತನ್ನ ಟ್ವೀಟ್ ಮೂಲಕ ಜನರನ್ನು ದಾರಿತಪ್ಪಿಸಿದ್ದಾರೆ ಎಂದು ದೂರುದಾರ ಆಶಿಶ್ ಕಟಿಯಾರ್ ಆರೋಪಿಸಿದ್ದರು.

ಟ್ವೀಟ್ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಕ್ಕಾಗಿ ಸೀತಾಪುರದಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮೊಹಮ್ಮದ್ ಜುಬೇರ್ ಅವರಿಗೆ ಸುಪ್ರೀಂ ಕೋರ್ಟ್ ಇತ್ತೀಚೆಗೆ ಐದು ದಿನಗಳ ಮಧ್ಯಂತರ ಜಾಮೀನು ನೀಡಿತ್ತು.

1983 ರಲ್ಲಿ ಬಿಡುಗಡೆಯಾದ ಹಿಂದಿ ಚಲನಚಿತ್ರವೊಂದರ ಸ್ಕ್ರೀನ್‌ಶಾಟ್ ಹೊಂದಿರುವ ನಾಲ್ಕು ವರ್ಷಗಳ ಹಳೆಯ ಟ್ವೀಟ್‌ನ ಮೇಲೆ ಮೊಹಮ್ಮದ್ ಜುಬೇರ್ ಅವರನ್ನು ಜೂನ್ 27 ರಂದು ಮೊದಲ ಬಾರಿಗೆ ದೆಹಲಿ ಪೊಲೀಸರು ಬಂಧಿಸಿದ್ದರು.

SCROLL FOR NEXT