ದೇಶ

ಒಂದೇ ಆಟೋದಲ್ಲಿ 27 ಮಂದಿ ಪ್ರಯಾಣ; 11500 ರೂ. ದಂಡ ಹಾಕಿ, ವಾಹನ ಸೀಜ್ ಮಾಡಿದ ಪೊಲೀಸರು!

Srinivasamurthy VN

ನವದೆಹಲಿ: ಬಕ್ರೀದ್ ಆಚರಣೆ ವೇಳೆ ಒಂದೇ ಆಟೋದಲ್ಲಿ 27 ಮಂದಿ ಪ್ರಯಾಣ ಮಾಡುತ್ತಿದ್ದ ಕಾರಣ ಉತ್ತರ ಪ್ರದೇಶ ಪೊಲೀಸರು ಆಟೋವನ್ನು ಸೀಜ್ ಮಾಡಿ ಚಾಲಕನಿಗೆ 11, 500 ರೂ ದಂಡ ಹಾಕಿದ್ದಾರೆ.

ಉತ್ತರ ಪ್ರದೇಶದ ಫತೇಪುರದ ಬಿಂಡ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಒಂದೇ ಆಟೋ ರಿಕ್ಷಾದಲ್ಲಿ 27 ಮಂದಿಯನ್ನು ಕರೆದೊಯುತ್ತಿದ್ದ ಚಾಲಕನಿಗೆ ಪೊಲೀಸರು ದಂಡ ಹಾಕಿ ಆಟೋ ಸೀಜ್ ಮಾಡಿದ್ದಾರೆ. ಈ ಹಿಂದೆ ಸಾಕಷ್ಟು ಬಾರಿ ಇದೇ ಪ್ರದೇಶದಲ್ಲಿ ಪೊಲೀಸರು ಸಾಮರ್ಥ್ಯಕ್ಕಿಂತ ಹೆಚ್ಚು ಪ್ರಯಾಣಿಕರನ್ನು ಹೊತ್ತೊಯ್ಯದಂತೆ ಮನವಿ ಮಾಡಿದ್ದರು. ಆದರೆ ಆಟೋ ಚಾಲಕರು ತಮ್ಮ ಹಳೇ ಛಾಳಿ ಮುಂದುವರೆಸಿದ್ದರು.

ಆದರೆ ನಿನ್ನೆ ಕಾರ್ಯಾಚರಣೆಗೆ ಇಳಿದಿದ್ದ ಪೊಲೀಸರು ಆಟೋವೊಂದನ್ನು ನಿಲ್ಲಿಸಿದಾಗ ಬೇಸ್ತು ಬಿದ್ದಿದ್ದಾರೆ. ಒಂದೇ ಆಟೋದಲ್ಲಿ ಬರೊಬ್ಬರಿ 27 ಮಂದಿ ಪ್ರಯಾಣಿಸುತ್ತಿದ್ದ ವಿಚಾರ ಬಹಿರಂಗವಾಗಿದೆ. ಪೊಲೀಸರು ಈ ಆಟೋದ ವಿಡಿಯೋ ಮಾಡಿಕೊಂಡಿದ್ದು, ಆಟೋದಿಂದ ಒಬ್ಬಬ್ಬರೇ ಪ್ರಯಾಣಿಕರು ಕೆಳಿಗಿಳಿಯುತ್ತಿರುವುದನ್ನು ಚಿತ್ರೀಕರಿಸಿದ್ದಾರೆ, ಈ ವೇಳೆ ಆಟೋದಿಂದ 27 ಮಂದಿ ಪ್ರಯಾಣಿಕರು ಕೆಳಗಿಳಿದಿದ್ದಾರೆ. 

ಬಳಿಕ ಆಟೋವನ್ನು ವಶಕ್ಕೆ ಪಡೆದ ಪೊಲೀಸರು ಚಾಲಕನಿಗೆ 11, 500 ರೂ ದಂಡ ವಿಧಿಸಿದ್ದಾರೆ. 

ಸ್ಥಳೀಯ ಮಾಧ್ಯಮಗಳ ಪ್ರಕಾರ, ಫತೇಪುರದ ಬಿಂಡ್ಕಿ ಕೊಟ್ವಾಲಿ ಪ್ರದೇಶದ ಬಳಿ ಸ್ಪೀಡ್ ಗನ್‌ನಿಂದ ಪರಿಶೀಲಿಸಿದಾಗ ಪೊಲೀಸರು ಆಟೋರಿಕ್ಷಾವನ್ನು ತಡೆದರು. ಅತಿ ವೇಗದಿಂದ ಬಂದ ವಾಹನವನ್ನು ಪೊಲೀಸರು ಹಿಂಬಾಲಿಸಿದರು. ವರದಿಯ ಪ್ರಕಾರ, ಪೊಲೀಸರು ಪ್ರಯಾಣಿಕರನ್ನು ವಾಹನದಿಂದ ಕೆಳಗಿಳಿಸಲು ಕೇಳಿದಾಗ, 27 ಜನರು ವಾಹನದಿಂದ ಹೊರಬರುವುದನ್ನು ನೋಡಿ ಆಶ್ಚರ್ಯಚಕಿತರಾದರು. ಇದೇ ವೇಳೆ ಆಟೋ ರಿಕ್ಷಾವನ್ನು ವಶಪಡಿಸಿಕೊಂಡು ದಂಡಹಾಕಿದರು.

SCROLL FOR NEXT