ದೇಶ

ಲಖನೌ ಲುಲು ಮಾಲ್‌ನಲ್ಲಿ ನಮಾಜ್: ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲು

Lingaraj Badiger

ಲಖನೌ: ಉತ್ತರ ಪ್ರದೇಶದ ಲಖನೌ ನಲ್ಲಿ ಇತ್ತೀಚೆಗಷ್ಟೇ ಉದ್ಘಾಟನೆಗೊಂಡ ಲುಲು ಮಾಲ್‌ನಲ್ಲಿ ನಮಾಜ್ ವಿಚಾರವಾಗಿ ಗಲಾಟೆ ನಡೆದಿರುವ ಹಿನ್ನೆಲೆಯಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಖಿಲ ಭಾರತ ಹಿಂದೂ ಮಹಾಸಭಾದ ಶಿಶಿರ್ ಚತುರ್ವೇದಿ ಅವರು ನೀಡಿದ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ. ಮಾಲ್ ಒಳಗೆ ಕೆಲವರು ನಮಾಜ್ ಮಾಡುತ್ತಿರುವ ವೀಡಿಯೊ ವೈರಲ್ ಆದ ನಂತರ ಈ ಪ್ರಕರಣ ದಾಖಲಾಗಿದೆ.

ಜುಲೈ 10 ರಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಈ ಲುಲು ಮಾಲ್ ಅನ್ನು ಉದ್ಘಾಟಿಸಿದ್ದರು.

ಅಖಿಲ ಭಾರತ ಹಿಂದೂ ಮಹಾಸಭಾದ ಶಿಶಿರ್ ಚತುರ್ವೇದಿ ಅವರು ಲುಲು ಮಾಲ್‌ನಲ್ಲಿ ನಮಾಜ್ ಮಾಡುತ್ತಿರುವ ಬಗ್ಗೆ ದೂರು ದಾಖಲಿಸಿದ್ದಾರೆ. ತನಿಖೆಯ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸುಶಾಂತ್ ಗಾಲ್ಫ್ ಸಿಟಿಯ ಪೊಲೀಸ್ ಠಾಣೆ ಪ್ರಭಾರಿ ಅಜಯ್ ಪ್ರತಾಪ್ ಸಿಂಗ್ ಅವರು ಹೇಳಿದ್ದಾರೆ.

"ಲುಲು ಮಾಲ್ ಮ್ಯಾನೇಜ್‌ಮೆಂಟ್ ನೀಡಿದ ದೂರಿನ ಮೇರೆಗೆ ಸುಶಾಂತ್ ಗಾಲ್ಫ್ ಸಿಟಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಎಫ್‌ಐಆರ್‌ನಲ್ಲಿ ಐಪಿಸಿ ಸೆಕ್ಷನ್ 153 ಎ, 295 ಎ, 341 ಮತ್ತು ಇತರ ಸೆಕ್ಷನ್ ಗಳಡಿ ಕೇಸ್ ದಾಖಲಿಸಲಾಗಿದೆ " ಎಂದು ಅವರು ತಿಳಿಸಿದ್ದಾರೆ.

ಆದರೆ, ಲುಲು ಮಾಲ್‌ನಲ್ಲಿ ಯಾವುದೇ ಪ್ರಾರ್ಥನೆಗೆ ಅವಕಾಶವಿಲ್ಲ ಎಂದು ಲುಲು ಮಾಲ್‌ನ ಜನರಲ್ ಮ್ಯಾನೇಜರ್ ಸಮೀರ್ ವರ್ಮಾ ಹೇಳಿದ್ದಾರೆ.

"ಲುಲು ಮಾಲ್ ಎಲ್ಲಾ ಧರ್ಮಗಳನ್ನು ಗೌರವಿಸುತ್ತದೆ. ಆದರೆ ಯಾವುದೇ ರೀತಿಯ ಪೂಜೆಗೆ ಇಲ್ಲಿ ಅನುಮತಿ ಇಲ್ಲ. ಈ ನಿಟ್ಟಿನಲ್ಲಿ ನಾವು ನಮ್ಮ ಸಿಬ್ಬಂದಿಗೆ ಇಂತಹ ಘಟನೆಗಳ ಮೇಲೆ ನಿಗಾ ಇಡಲು ಕಟ್ಟುನಿಟ್ಟಿನ ತರಬೇತಿಯನ್ನು ನೀಡುತ್ತೇವೆ" ಎಂದು ಅವರು ತಿಳಿಸಿದ್ದಾರೆ.

SCROLL FOR NEXT