ದೇಶ

ಭಗತ್ ಸಿಂಗ್ ಭಯೋತ್ಪಾದಕ: ವಿವಾದದ ಕಿಡಿ ಹೊತ್ತಿಸಿದ ಎಸ್ಎಡಿ ಸಂಸದ!

Srinivas Rao BV

ಚಂಡೀಗಢ: ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರನ್ನು ಭಯೋತ್ಪಾದಕ ಎಂದು ಶಿರೋಮಣಿ ಅಕಾಲಿದಳದ ಸಂಸದ ಸಿಮ್ರನ್ ಜಿತ್ ಸಿಂಗ್ ಮಾನ್ ಹೇಳಿದ್ದು ವಿವಾದ ಉಂಟಾಗಿದೆ. 

ಪಂಜಾಬ್ ಸಂಸದರ ಹೇಳಿಕೆಗೆ ರಾಜ್ಯದಲ್ಲಿ ತೀವ್ರ ವಿರೋಧ ಎದುರಾಗಿದ್ದು, ಪಂಜಾಬ್ ನ ಸಚಿವ ಗುರ್ಮೀತ್ ಸಿಂಗ್ ಮೀತ್ ಹಯರ್ ಸಿಮ್ರನ್ ಜಿತ್ ಸಿಂಗ್ ಮಾನ್ ಅವರಿಂದ ಬೇಷರತ್ ಕ್ಷಮೆಗೆ ಪಟ್ಟು ಹಿಡಿದಿದ್ದಾರೆ. 

ಗುರ್ಮೀತ್ ಸಿಂಗ್ ಪಂಜಾಬ್ ನ ಉನ್ನತ ಶಿಕ್ಷಣ ಹಾಗೂ ಭಾಷಾ ಸಚಿವರಾಗಿದ್ದು ದೇಶದ ಸ್ವಾತಂತ್ರ್ಯಕ್ಕಾಗಿ ಅತ್ಯಂತ ಶ್ರೇಷ್ಠ ಬಲಿದಾನವನ್ನು ಮಾಡಿದ ಭಗತ್ ಸಿಂಗ್ ಅವರನ್ನು ಸರ್ಕಾರ ಹುತಾತ್ಮ ಸ್ಥಾನದಲ್ಲಿರಿಸಿ ಗೌರವಿಸುತ್ತದೆ ಎಂದು ಹೇಳಿದ್ದಾರೆ.
 
ಗುರುವಾರದಂದು ಕರ್ನಾಲ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಸಿಮ್ರನ್ ಜಿತ್ ಸಿಂಗ್ ಮಾನ್, ಭಗತ್ ಸಿಂಗ್ ಅವರನ್ನೇಕೆ ಭಯೋತ್ಪಾದಕರೆಂದು ಹೇಳಿದ್ದು ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, "ಅರ್ಥ ಮಾಡಿಕೊಳ್ಳಲು ಯತ್ನಿಸಿ ಸರ್ದಾರ್ ಭಗತ್ ಸಿಂಗ್ ಯುವ ಆಂಗ್ಲ ಅಧಿಕಾರಿಯೊಬ್ಬರನ್ನು ಹತ್ಯೆ ಮಾಡಿದ್ದರು.ಅಮೃತ್ ಧಾರಿ ಸಿಖ್ ಪೇದೆಯನ್ನು ಹತ್ಯೆ ಮಾಡಿದ್ದರು. ಅಂದಿನ ಕಾಲದ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಬಾಂಬ್ ಸ್ಫೋಟಿಸಿದ್ದರು. ಈಗ ಹೇಳಿ ಭಗತ್ ಸಿಂಗ್ ಭಯೋತ್ಪಾದಕರು ಹೌದೋ ಅಲ್ಲವೋ ಎಂದು ಮರುಪ್ರಶ್ನೆ ಹಾಕಿದ್ದರು.

ಸಂಸದರ ಈ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಕೇವಲ ಪಂಜಾಬ್ ಅಷ್ಟೇ ಅಲ್ಲದೇ ಇಡೀ ದೇಶವೇ ಭಗತ್ ಸಿಂಗ್, ರಾಜ್ ಗುರು, ಸುಖ್ ದೇವ್ ಅವರನ್ನು ಪೂಜಿಸುತ್ತದೆ ಎಂದು ಪಂಜಾಬ್ ನ ಸಚಿವ ಗುರ್ಮೀತ್ ಸಿಂಗ್ ಹೇಳಿದ್ದಾರೆ. 

SCROLL FOR NEXT