ದೇಶ

ಉಪ ರಾಷ್ಟ್ರಪತಿ ಚುನಾವಣೆ: ಪ.ಬಂಗಾಳ ರಾಜ್ಯಪಾಲ ಜಗದೀಪ್ ಧಂಖರ್ ಎನ್ ಡಿಎ ಅಭ್ಯರ್ಥಿ

Srinivasamurthy VN

ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ ಭಾರತೀಯ ಜನತಾ ಪಕ್ಷ ಉಪ ರಾಷ್ಟ್ರಪತಿ ಚುನಾವಣೆಗೆ ತನ್ನ ಅಭ್ಯರ್ಥಿ ಘೋಷಣೆ ಮಾಡಿದ್ದು, ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧಂಖರ್ ರನ್ನು ತನ್ನ ಅಧಿಕೃತ ಅಭ್ಯರ್ಥಿಯಾಗಿ ಘೋಷಣೆ ಮಾಡಿದೆ.

ಈ ಕುರಿತಂತೆ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರು ಪಕ್ಷದ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದು, ಪಶ್ಚಿಮ ಬಂಗಾಳದ ಹಾಲಿ ರಾಜ್ಯಪಾಲರಾಗಿರುವ ಜಗದೀಪ್ ಧಂಖರ್ ರನ್ನು ಉಪ ರಾಷ್ಟ್ರಪತಿ ಚುನಾವಣೆ ಎನ್ ಡಿಎ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದಾರೆ.

ಈ ಹಿಂದೆ ಕರ್ನಾಟಕ, ಆಂಧ್ರ ಪ್ರದೇಶ ಬಿಜೆಪಿಯ ಹಲವು ನಾಯಕರ ಹೆಸರುಗಳು ಉಪ ರಾಷ್ಟ್ರಪತಿ ಅಭ್ಯರ್ಥಿ ಪಟ್ಟಿಯಲ್ಲಿ ಕೇಳಿ ಬಂದಿತ್ತಾದರೂ ಅಂತಿಮವಾಗಿ ಜಗದೀಪ್ ಧಂಖರ್ ರನ್ನು ಉಪ ರಾಷ್ಟ್ರಪತಿ ಚುನಾವಣೆಯ ಎನ್ ಡಿಎ ಅಭ್ಯರ್ಥಿಯಾಗಿ ಘೋಷಣೆ ಮಾಡಲಾಗಿದೆ.

ಶನಿವಾರ ಸಂಜೆ ನಡೆದ ಭಾರತೀಯ ಜನತಾ ಪಕ್ಷದ ಸಂಸದೀಯ ಮಂಡಳಿಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆದಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಸಂಸದೀಯ ಮಂಡಳಿಯು ಬಿಜೆಪಿಯ ಅತ್ಯುನ್ನತ ಸಾಂಸ್ಥಿಕ ಸಂಸ್ಥೆಯಾಗಿದೆ ಮತ್ತು ಅದರ ಸದಸ್ಯರಲ್ಲಿ ಮೋದಿ ಮತ್ತು ಕೇಂದ್ರ ಸಚಿವರಾದ ಅಮಿತ್ ಶಾ, ರಾಜನಾಥ್ ಸಿಂಗ್ ಮತ್ತು ನಿತಿನ್ ಗಡ್ಕರಿ ಅವರಲ್ಲದೆ ಪಕ್ಷದ ಅಧ್ಯಕ್ಷ ಜೆ ಪಿ ನಡ್ಡಾ ಸೇರಿದಂತೆ ಇತರರು ಇದ್ದಾರೆ.

ಹಾಲಿ ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಅವರ ಅವಧಿ ಆಗಸ್ಟ್ 10 ರಂದು ಕೊನೆಗೊಳ್ಳಲಿದ್ದು, ಉಪ ರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಸಲ್ಲಿಸಲು ಜುಲೈ 19 ಕೊನೆಯ ದಿನಾಂಕವಾಗಿದ್ದು, ಆಗಸ್ಟ್ 6 ರಂದು ಚುನಾವಣೆ ನಿಗದಿಯಾಗಿದೆ.
 

SCROLL FOR NEXT