ದೇಶ

ನಾಳೆ ರಾಷ್ಟ್ರಪತಿ ಚುನಾವಣೆ: ಮುರ್ಮು ಬಹುತೇಕ ಗೆಲುವು ಸಾಧ್ಯತೆ

Nagaraja AB

ನವದೆಹಲಿ: ನಾಳೆ ರಾಷ್ಟ್ರಪತಿ ಚುನಾವಣೆ ನಡೆಯಲಿದೆ. ದೇಶದ ಸುಮಾರು 4,800 ಚುನಾಯಿತ ಜನ ಪ್ರತಿನಿಧಿಗಳು 15ನೇ ರಾಷ್ಟ್ರಪತಿ ಆಯ್ಕೆ ಮಾಡಲು ಸೋಮವಾರ ಮತದಾನ ಮಾಡಲಿದ್ದಾರೆ. ಎನ್ ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರು ಶೇಕಡಾ 60 ರಷ್ಟು ಮತಗಳನ್ನು ಪಡೆದು ವಿರೋಧ ಪಕ್ಷಗಳ ಅಭ್ಯರ್ಥಿ ಯಶವಂತ ಸಿನ್ಹಾ ಅವರನ್ನು ಸೋಲಿಸುವ ಸಾಧ್ಯತೆ ಹೆಚ್ಚಾಗಿದೆ.

ಸಂಸತ್ ಭವನ ಹಾಗೂ ರಾಜ್ಯ ವಿಧಾನಸಭೆಗಳಲ್ಲಿ ಮತದಾನ ನಡೆಯಲಿದ್ದು, ಬ್ಯಾಲೆಟ್ ಬಾಕ್ಸ್ ಗಳು ಈಗಾಗಲೇ ಅಲ್ಲಿಗೆ ತಲುಪಿವೆ. ಜುಲೈ 21 ರಂದು ಸಂಸತ್ ಭವನದಲ್ಲಿ ಮತ ಎಣಿಕೆ ನಡೆಯಲಿದ್ದು, ಜುಲೈ 25 ರಂದು ಮುಂದಿನ ರಾಷ್ಟ್ರಪತಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಪ್ರಾದೇಶಿಕ ಪಕ್ಷಗಳಾದ ಬಿಜು ಜನತಾ ದಳ, ವೈಎಸ್‌ಆರ್ ಕಾಂಗ್ರೆಸ್ , ಬಹುಜನ ಸಮಾಜ ಪಕ್ಷ, ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ, ತೆಲುಗು ದೇಶಂ ಪಕ್ಷ, ಜನತಾ ದಳ-ಜಾತ್ಯತೀತ, ಶಿರೋಮಣಿ ಅಕಾಲಿದಳ, ಶಿವಸೇನೆ ಮುಂತಾದವುಗಳ ಬೆಂಬಲದೊಂದಿಗೆ ಮುರ್ಮು ಅವರ ಮತ ಹಂಚಿಕೆಯು ಸುಮಾರು ಮೂರನೇ ಎರಡರಷ್ಟು ತಲುಪುವ ಸಾಧ್ಯತೆಯಿದೆ ಮತ್ತು ಅವರು ಬುಡಕಟ್ಟು ಸಮುದಾಯದಿಂದ ಉನ್ನತ ಸಾಂವಿಧಾನಿಕ ಹುದ್ದೆಯನ್ನು ಅಲಂಕರಿಸುತ್ತಿರುವ ಮೊದಲ ಮಹಿಳೆಯಾಗಲಿದ್ದಾರೆ.

ಒಟ್ಟು 10,86,431 ಮತಗಳ ಪೈಕಿ ವಿವಿಧ ಪ್ರಾದೇಶಿಕ ಪಕ್ಷಗಳ ಬೆಂಬಲದ ನಂತರ ಎನ್ ಡಿಎ ಅಭ್ಯರ್ಥಿ ಈಗ 6.67 ಲಕ್ಷಕ್ಕೂ ಹೆಚ್ಚು ಮತಗಳನ್ನು ಹೊಂದಿದ್ದಾರೆ. ಪ್ರಾತಿನಿಧ್ಯ ವ್ಯವಸ್ಥೆಯ ಮೂಲಕ ರಾಷ್ಟ್ರಪತಿ ಆಯ್ಕೆ ನಡೆಯಲಿದ್ದು, ಚುನಾಯಿತ ಸಂಸದರು ಮತ್ತು ರಾಜ್ಯ ಶಾಸಕಾಂಗ ಸಭೆಗಳ ಸದಸ್ಯರು ಮತದಾನ ಮಾಡಲು ಅರ್ಹರಾಗಿದ್ದಾರೆ.  ನಾಮನಿರ್ದೇಶಿತ ಸಂಸದರು ಮತ್ತು ಶಾಸಕರು ಮತ್ತು ವಿಧಾನ ಪರಿಷತ್ತಿನ ಸದಸ್ಯರು ಈ ಚುನಾವಣೆಯಲ್ಲಿ ಮತ ಚಲಾಯಿಸಲು ಅರ್ಹರಾಗಿರುವುದಿಲ್ಲ.

SCROLL FOR NEXT