ದೇಶ

ಸಂಸತ್ ಅಧಿವೇಶನ: ಅಗ್ನಿಪಥ್, ಹಣದುಬ್ಬರ, ಜಿಎಸ್ ಟಿ ಕುರಿತು ಕಾಂಗ್ರೆಸ್ ಗದ್ದಲ, ರಾಜ್ಯಸಭೆ ಕಲಾಪ ದಿನದ ಮಟ್ಟಿಗೆ ಮುಂದೂಡಿಕೆ

Nagaraja AB

ನವದೆಹಲಿ: ಅಗತ್ಯ ವಸ್ತುಗಳ ಬೆಲೆ ಏರಿಕೆ, ಜಿಎಸ್ ಟಿ ಸೇರಿದಂತೆ ಹಲವು ವಿಚಾರಗಳನ್ನು ಮುಂದಿಟ್ಟುಕೊಂಡು ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರು ಘೋಷಣೆ ಕೂಗುತ್ತಾ, ಅಡ್ಡಿಪಡಿಸಿದ್ದರಿಂದ ಇಂದಿನಿಂದ ಆರಂಭವಾದ ಮುಂಗಾರು ಅಧಿವೇಶನದ ಮೊದಲ ದಿನದ ರಾಜ್ಯಸಭೆ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಲಾಯಿತು. ಇದಕ್ಕೂ ಮುನ್ನ ರಾಜ್ಯಸಭೆಯ ಅನೇಕ ನೂತನ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದರು. 

ನಂತರ ಸದನದ ಬಾವಿಗಿಳಿದ ಕಾಂಗ್ರೆಸ್ ಸದಸ್ಯರು, ಸರ್ಕಾರದ ವಿರುದ್ಧ ಘೋಷಣೆ ಕೂಗಲು ಆರಂಭಿಸಿದರು. ಇದನ್ನು ಗಮನಿಸಿದ ಸಭಾಪತಿ ವೆಂಕಯ್ಯ ನಾಯ್ಡು, ಕೆಲವು ಸದಸ್ಯರು ಕಲಾಪಕ್ಕೆ ಅಡ್ಡಿಪಡಿಸುವುದಾಗಿಯೇ ಬಂದಿದ್ದಾರೆ. ಉಳಿದ ಸದಸ್ಯರು ರಾಷ್ಟ್ರಪತಿ ಚುನಾವಣೆಯಲ್ಲಿ ಮತ ಚಲಾಯಿಸಲು ಹೋಗಿ, ನಾನು ದಿನದ ಮಟ್ಟಿಗೆ ಕಲಾಪವನ್ನು ಮುಂದೂಡುತ್ತೇನೆ ಎಂದು ಹೇಳಿದರು. 

ಇತ್ತೀಚಿಗೆ ನಿಧನರಾದ ಜಪಾನಿ ಮಾಜಿ ಪ್ರಧಾನಿ ಶಿಂಜೋ ಅಬೆ, ಎಎಇ ಮಾಜಿ ಅಧ್ಯಕ್ಷ ಶೇಕ್ ಖಲೀಫಾ ಬಿನ್ ಜಾಯೇದ್ ಅಲ್ ನಹ್ಯಾನ್ ಸೇರಿದಂತೆ ಮತ್ತಿತರರಿಗೆ ಶ್ರದ್ದಾಂಜಲಿ ಸಲ್ಲಿಸಿದ ಬಳಿಕ, ನಿಯಮ 267 ರ ಅಡಿಯಲ್ಲಿ ಕಾಂಗ್ರೆಸ್ ಸದಸ್ಯ ದೀಪೆಂದರ್ ಹೂಡಾ, ಅಗ್ನಿಪಥ್ ಯೋಜನೆ ಕುರಿತ ಚರ್ಚೆಗೆ ಒತ್ತಾಯಿಸಿದರು. ಮತ್ತೋರ್ವ ಕಾಂಗ್ರೆಸ್ ಸದಸ್ಯ ಶಕ್ತಿ ಸಿನ್ಹಾ ಗೋಯಿಲ್, ಕೂಡಲೇ ಅಗ್ನಿಪಥ್ ಯೋಜನೆ ರದ್ದುಪಡಿಸಬೇಕೆಂದು ಆಗ್ರಹಿಸಿದರು. 

ಇತ್ತ ಲೋಕಸಭೆಯಲ್ಲೂ ಇದೇ ರೀತಿ ನಡೆಯಿತು. ಎಲ್ ಪಿಜಿ ಸಿಲಿಂಡರ್ ಬೆಲೆಯನ್ನು ಇಳಿಸಬೇಕು ಮತ್ತು ಸರ್ಕಾರಿ ಯೋಜನೆಗಳ ಫಲಾನುಭವಿಗಳಿಗೆ ಸಬ್ಸಿಡಿ ನೀಡಬೇಕೆಂದು ಕಾಂಗ್ರೆಸ್ ಸದಸ್ಯ ಮಾಣಿಕಂ ಟ್ಯಾಗೋರ್ ಸರ್ಕಾರವನ್ನು ಒತ್ತಾಯಿಸಿದರು. ಲೋಕಸಭೆಯಲ್ಲಿ ಇತ್ತೀಚಿಗೆ ನಿಧನರಾದ ಗಣ್ಯರಿಗೆ ಸಂತಾಪ ಸಲ್ಲಿಸಲಾಯಿತು. ನೂತನ ಸದಸ್ಯರು ಪ್ರಮಾಣ  ವಚನ ಸ್ವೀಕರಿಸಿದ ನಂತರ ಮಧ್ಯಾಹ್ನ 2 ಗಂಟೆಯವರೆಗೂ ಕಲಾಪವನ್ನು ಮುಂದೂಡಲಾಯಿತು.

SCROLL FOR NEXT