ದೇಶ

ಗುಜರಾತ್‌ ಚುನಾವಣೆ: ಅಧಿಕಾರಕ್ಕೆ ಬಂದರೆ 300 ಯುನಿಟ್‌ ವಿದ್ಯುತ್ ಉಚಿತ: ಅರವಿಂದ್ ಕೇಜ್ರಿವಾಲ್

Srinivasamurthy VN

ಸೂರತ್: ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) ಅಧಿಕಾರಕ್ಕೆ ಬಂದರೆ ಪ್ರತಿ ತಿಂಗಳು 300 ಯುನಿಟ್ ವರೆಗೂ ವಿದ್ಯುತ್ ಉಚಿತವಾಗಿ ನೀಡುತ್ತೇವೆ ಎಂದು ದೆಹಲಿ ಮುಖ್ಯಮಂತ್ರಿ ಹಾಗೂ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಗುರುವಾರ ಭರವಸೆ ನೀಡಿದ್ದಾರೆ.

ಸೂರತ್‌ನಲ್ಲಿ ನಡೆದ ಸಭೆಯಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, ರಾಜ್ಯದಲ್ಲಿ ಆಪ್ ಅಧಿಕಾರಕ್ಕೆ ಬಂದರೆ ಯಾವುದೇ ಅಡಚಣೆಯಿಲ್ಲದೆ ನಿರಂತರ ವಿದ್ಯುತ್ ಪೂರೈಕೆ ಮಾಡಲಾಗುತ್ತದೆ. ನಾನು ನಿಮಗೆ ಭರವಸೆ ನೀಡುತ್ತೇನೆ. ಇದರಲ್ಲಿ ಯಾವುದೇ ತಪ್ಪು ಕಂಡುಬಂದರೆ ಮುಂದಿನ ಚುನಾವಣೆಯಲ್ಲಿ ಎಎಪಿಗೆ ಮತ ಹಾಕದಿರಲು ನೀವು ಸ್ವತಂತ್ರರು. ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಜನರ ಆಕಾಂಕ್ಷೆಗಳನ್ನು ಈಡೇರಿಸಲಾಗುವುದು ಎಂದು ವಾಗ್ದಾನ ನೀಡಿದರು.

ಜುಲೈ ತಿಂಗಳಲ್ಲಿ ಎರಡನೇ ಬಾರಿಗೆ ರಾಜ್ಯಕ್ಕೆ ಭೇಟಿ ನೀಡಿರುವ ಕೇಜ್ರಿವಾಲ್, ಬಾಕಿ ಉಳಿದಿರುವ 2021 ಡಿಸೆಂಬರ್ 31ರ ಮೊದಲಿನ ಎಲ್ಲ ವಿದ್ಯುತ್ ಬಿಲ್‌ಗಳನ್ನು ಮನ್ನಾ ಮಾಡಲಾಗುವುದು. ಆಡಳಿತರೂಢ ಬಿಜೆಪಿ ವಿರುದ್ಧವು ವಾಗ್ದಾಳಿ ನಡೆಸಿರುವ ಕೇಜ್ರಿವಾಲ್, ಜನಸಾಮಾನ್ಯರು 27 ವರ್ಷಗಳ ಬಿಜೆಪಿ ಆಡಳಿತದಿಂದ ಬೇಸತ್ತಿದ್ದಾರೆ. ದೆಹಲಿ ಮಾದರಿ ಸರ್ಕಾರದ ಭರವಸೆ ನೀಡಿರುವ ಕೇಜ್ರಿವಾಲ್, ಭ್ರಷ್ಟಾಚಾರವನ್ನು ತೊಡೆದು ಹಾಕಿದರೆ ಗುಜರಾತ್‌ನಲ್ಲಿ ವಿದ್ಯುತ್ ಉಚಿತವಾಗಿ ನೀಡಲು ಸಾಧ್ಯ ಎಂದು ಹೇಳಿದರು.

ಗುಜರಾತ್‌ನಲ್ಲಿ ಡಿಸೆಂಬರ್‌ನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ದೆಹಲಿ ಹಾಗೂ ಪಂಜಾಬ್ ಬಳಿಕ ಗುಜರಾತ್ ಮೇಲೆ ಎಎಪಿ ಕಣ್ಣು ನೆಟ್ಟಿದೆ.
 

SCROLL FOR NEXT