ದೇಶ

ಭಾರತದ 15ನೇ ರಾಷ್ಟ್ರಪತಿ ಯಾರು? ಮತ ಎಣಿಕೆ ಕಾರ್ಯ ಪ್ರಗತಿಯಲ್ಲಿ, ಇಂದು ಸಂಜೆ ಫಲಿತಾಂಶ

Sumana Upadhyaya

ನವದೆಹಲಿ: ರಾಷ್ಟ್ರಪತಿ ಚುನಾವಣೆಯ ಮತ ಎಣಿಕೆ ದೆಹಲಿಯ ಸಂಸತ್ ಭವನದಲ್ಲಿ ಈಗಾಗಲೇ ಆರಂಭವಾಗಿದ್ದು, ರಾಮ್ ನಾಥ್ ಕೋವಿಂದ್ ನಂತರ ದೇಶದ 15ನೇ ರಾಷ್ಟ್ರಪತಿ ಯಾರಾಗಲಿದ್ದಾರೆ ಎಂಬುದು ಇಂದು ಸಂಜೆ ಗೊತ್ತಾಗಲಿದೆ. 

ಆಡಳಿತಾರೂಢ ಎನ್‌ಡಿಎಯ ದ್ರೌಪದಿ ಮುರ್ಮು ಮತ್ತು ಪ್ರತಿಪಕ್ಷದ ಯಶವಂತ್ ಸಿನ್ಹಾ ಅವರ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಮುರ್ಮು ಪರವಾಗಿ ಹೆಚ್ಚಿನ ಮತಗಳು ಸಿಕ್ಕಿವೆ.  ಅವರು ಆಯ್ಕೆಯಾದರೆ, ದೇಶದ ಉನ್ನತ ಸಾಂವಿಧಾನಿಕ ಹುದ್ದೆಯನ್ನು ಅಲಂಕರಿಸುವ ಮೊದಲ ಬುಡಕಟ್ಟು ಮಹಿಳೆಯಾಗಲಿದ್ದಾರೆ.

ರಾಮನಾಥ್ ಕೋವಿಂದ್ ಅವರ ಅಧಿಕಾರಾವಧಿ ಜುಲೈ 24 ರಂದು ಕೊನೆಗೊಳ್ಳುತ್ತಿದ್ದು, ಜುಲೈ 25 ರಂದು ನೂತನ ರಾಷ್ಟ್ರಪತಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಚುನಾವಣೆಯ ಮುಖ್ಯ ಚುನಾವಣಾಧಿಕಾರಿಯಾಗಿರುವ ರಾಜ್ಯಸಭಾ ಪ್ರಧಾನ ಕಾರ್ಯದರ್ಶಿ ಪಿ ಸಿ ಮೋದಿ ಮತ ಎಣಿಕೆಯನ್ನು ನೋಡಿಕೊಳ್ಳಲಿದ್ದು, ಸಂಜೆ ವೇಳೆಗೆ ಫಲಿತಾಂಶ ಪ್ರಕಟವಾಗುವ ಸಾಧ್ಯತೆ ಇದೆ. ಮೋದಿಯವರು ಮೊದಲು ಎಲ್ಲಾ ಸಂಸದರ ಮತಗಳನ್ನು ಎಣಿಸಿದ ನಂತರ ಮತ್ತು ನಂತರ ಮತ್ತೆ 10 ರಾಜ್ಯಗಳ ಮತಗಳನ್ನು ವರ್ಣಮಾಲೆಯ ಕ್ರಮದಲ್ಲಿ ಎಣಿಸಿದ ನಂತರ ಚುನಾವಣಾ ಪ್ರವೃತ್ತಿಗಳ ಕುರಿತು ಸಂಕ್ಷಿಪ್ತಗೊಳಿಸುತ್ತಾರೆ.

776 ಸಂಸದರು ಮತ್ತು 4,033 ಚುನಾಯಿತ ಶಾಸಕರನ್ನು ಒಳಗೊಂಡಂತೆ ಒಟ್ಟು 4,809 ಮತದಾರರು ಚುನಾವಣೆಯಲ್ಲಿ ಮತ ಚಲಾಯಿಸಲು ಅರ್ಹರಾಗಿದ್ದರು. ಆದರೆ ನಾಮನಿರ್ದೇಶಿತ ಸಂಸದರು, ಶಾಸಕರು ಮತ್ತು ವಿಧಾನ ಪರಿಷತ್ತಿನ ಸದಸ್ಯರು ಈ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗಿಯಾಗುವುದಿಲ್ಲ. 

ಚುನಾವಣಾ ಆಯೋಗದ ಪ್ರಕಾರ, ಸೋಮವಾರ ನಡೆದ ಮತದಾನದಲ್ಲಿ ಒಟ್ಟು ಮತದಾರರಲ್ಲಿ ಶೇಕಡಾ 99ಕ್ಕೂ ಹೆಚ್ಚು ಮಂದಿ ಶಾಸಕರು, ಸಂಸದರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಬಿಜೆಪಿ ಸಂಸದರಾದ ಸನ್ನಿ ಡಿಯೋಲ್ ಮತ್ತು ಸಂಜಯ್ ಧೋತ್ರೆ ಸೇರಿದಂತೆ ಎಂಟು ಸಂಸದರು ಮತದಾನದಿಂದ ದೂರವುಳಿದಿದ್ದರು. 

ಸೋಮವಾರ ನಡೆದ ಚುನಾವಣೆಯಲ್ಲಿ ಬಿಜೆಪಿ ಮತ್ತು ಶಿವಸೇನೆಯ ತಲಾ ಇಬ್ಬರು ಸಂಸದರು ಮತ್ತು ಬಿಎಸ್‌ಪಿ, ಕಾಂಗ್ರೆಸ್, ಎಸ್‌ಪಿ ಮತ್ತು ಎಐಎಂಐಎಂನ ಒಬ್ಬರು ಮತದಾನದಿಂದ ತಪ್ಪಿಸಿಕೊಂಡಿದ್ದಾರೆ.

ಕಳೆದ ಬಾರಿ 2017ರಲ್ಲಿ ರಾಮನಾಥ್ ಕೋವಿಂದ್ ಅವರು ಒಟ್ಟು 10,69,358 ಮತಗಳಲ್ಲಿ 7,02,044 ಮತಗಳನ್ನು ಪಡೆದು ರಾಷ್ಟ್ರಪತಿಯಾದರು, ಅವರ ಪ್ರತಿಸ್ಪರ್ಧಿ ಮೀರಾ ಕುಮಾರ್ ಕೇವಲ 3,67,314 ಮತಗಳನ್ನು ಪಡೆದಿದ್ದರು.

SCROLL FOR NEXT