ದೇಶ

ವೈದ್ಯರ ಸಲಹೆ ಪಡೆಯದೆ ಅಂಗವಿಕಲರಿಗೆ ವಿಮಾನ ಪ್ರವೇಶ ನಿರಾಕರಿಸುವಂತಿಲ್ಲ, ಲಿಖಿತ ಮಾಹಿತಿ ಕಡ್ಡಾಯ: ಡಿಜಿಸಿಎ

Srinivasamurthy VN

ನವದೆಹಲಿ: ಅಂಗವಿಕಲರಿಗೆ ವಿಮಾನಕ್ಕೆ ಪ್ರವೇಶ ನೀಡುವ ನಿಯಮಗಳಲ್ಲಿ ನಾಗರಿಕ ವಿಮಾನಯಾನ ನಿರ್ದೇಶನಾಲಯವು (ಡಿಜಿಸಿಎ) ಬದಲಾವಣೆಗಳನ್ನು ಮಾಡಿದ್ದು, ವೈದ್ಯರ ಸಲಹೆ ಪಡೆಯದೆ ಅಂಗವಿಕಲರಿಗೆ ವಿಮಾನ ಪ್ರವೇಶ ನಿರಾಕರಿಸುವಂತಿಲ್ಲ ಮತ್ತು ಲಿಖಿತ ಮಾಹಿತಿ ನೀಡಬೇಕು ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ಶುಕ್ರವಾರ ಹೇಳಿದೆ.

ಅಂಗವಿಕಲ ವ್ಯಕ್ತಿಯ ಆರೋಗ್ಯವು ವಿಮಾನದಲ್ಲಿ ಪ್ರಯಾಣಿಸುವ ವೇಳೆ ಹದಗೆಡಬಹುದು ಎಂದು ವಿಮಾನಯಾನ ಸಂಸ್ಥೆ ಸಿಬ್ಬಂದಿಯ ಗಮನಕ್ಕೆ ಬಂದರೆ ವಿಮಾನ ನಿಲ್ದಾಣದ ವೈದರನ್ನು ಸಂಪರ್ಕಿಸಬೇಕು. ವೈದ್ಯರ ಸಲಹೆ ಮೇರೆಗೆ ವಿಮಾನ ಹತ್ತಿಸುವ ಅಥವಾ ನಿರಾಕರಿಸುವ ನಿರ್ಧಾರ ಕೈಗೊಳ್ಳಬೇಕು ಎಂದು ವಿಮಾನಯಾನ ನಿಯಂತ್ರಣ ಸಂಸ್ಥೆ ಡಿಜಿಸಿಎ ಶುಕ್ರವಾರ ಹೇಳಿದೆ.

ಒಂದೊಮ್ಮೆ, ವೈದ್ಯರ ಸಲಹೆ ಅನ್ವಯ ಅಂಗವಿಕಲನಿಗೆ ವಿಮಾನ ಹತ್ತಲು ನಿರಾಕರಿಸಿದರೆ, ಕೂಡಲೇ ಪ್ರಯಾಣಿಕನಿಗೆ ಕಾರಣ ಸಹಿತ ಟಿಪ್ಪಣಿ ಜೊತೆ ಲಿಖಿತ ರೂಪದಲ್ಲಿ ತಿಳಿಸಬೇಕು ಎಂದು ಡಿಜಿಸಿಎ ತಿಳಿಸಿದೆ.

ಮೇ 7 ರಂದು ರಾಂಚಿ ವಿಮಾನ ನಿಲ್ದಾಣದಲ್ಲಿ ಅಂಗವಿಕಲ ಬಾಲಕನಿಗೆ ಬೋರ್ಡಿಂಗ್ ನಿರಾಕರಿಸಿದ್ದಕ್ಕಾಗಿ ಇಂಡಿಗೋ ಸಂಸ್ಥೆಗೆ 5 ಲಕ್ಷ ರೂಪಾಯಿ ದಂಡ ವಿಧಿಸಿದ್ದ ಡಿಜಿಸಿಎ, ನಿಯಮಗಳಲ್ಲಿ ಬದಲಾವಣೆ ತರುವ ಬಗ್ಗೆ ಪ್ರಸ್ತಾಪಿಸಿತ್ತು.

ವಿಮಾನ ಹತ್ತುವ ಸಂದರ್ಭದಲ್ಲಿ ಬಾಲಕ ಭಯಭೀತನಾದಂತೆ ಕಾಣುತ್ತಿದ್ದ. ಹಾಗಾಗಿ, ರಾಂಚಿ-ಹೈದರಾಬಾದ್ ವಿಮಾನವನ್ನು ಹತ್ತಲು ಬಾಲಕನಿಗೆ ಅನುಮತಿ ನಿರಾಕರಿಸಲಾಗಿದೆ ಎಂದು ಇಂಡಿಗೊ ತಿಳಿಸಿತ್ತು. ನಂತರ, ಪೋಷಕರು ಸಹ ವಿಮಾನ ಹತ್ತದಿರಲು ನಿರ್ಧರಿಸಿದ್ದರು. ಈ ವಿಚಾರ ಮಾಧ್ಯಮಗಳಲ್ಲಿ ವ್ಯಾಪಕ ಸುದ್ದಿಗೆ ಗ್ರಾಸವಾಗಿತ್ತು. ಅಲ್ಲದೆ ಸಾರ್ವಜನಿಕ ವಲಯದಲ್ಲಿ ವಿಮಾನಯಾನ ಸಂಸ್ಥೆ ವ್ಯಾಪಕ ಟೀಕೆಗೂ ಗುರಿಯಾಗಿತ್ತು. 

SCROLL FOR NEXT