ದೇಶ

ನೂತನ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ನಾಳೆ ಪ್ರಮಾಣ ವಚನ ಸ್ವೀಕಾರ

Nagaraja AB

ನವದೆಹಲಿ: ಇತ್ತೀಚಿಗೆ ನಡೆದ ಚುನಾವಣೆಯಲ್ಲಿ ದೇಶದ ನೂತನ ರಾಷ್ಟ್ರಪತಿಯಾಗಿ ಆಯ್ಕೆಯಾಗಿರುವ ದ್ರೌಪದಿ ಮುರ್ಮು ಅವರು ನಾಳೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಸಂಸತ್ತಿನ ಸೆಂಟ್ರಲ್ ಹಾಲ್ ನಲ್ಲಿ  ಸೋಮವಾರ ಬೆಳಗ್ಗೆ 10-15ಕ್ಕೆ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದ್ದು, ಮುಖ್ಯ ನ್ಯಾಯಮೂರ್ತಿ ಎನ್. ವಿ. ರಮಣ ಅವರು ಪ್ರಮಾಣ ವಚನ ಬೋಧಿಸಲಿದ್ದಾರೆ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.

ಸೇನಾ ಸಿಬ್ಬಂದಿ 21 ಬಾರಿ ಕುಶಾಲ ತೋಪು ಸಿಡಿಸಿದ ನಂತರ ರಾಷ್ಟ್ರಪತಿಯಾಗಿ ಆಯ್ಕೆಯಾದವರು ಪ್ರಮಾಣ ವಚನ ಸ್ವೀಕರಿಸಲಿದ್ದು, ನಂತರ ಭಾಷಣ ಮಾಡಲಿದ್ದಾರೆ ಎಂದು ಗೃಹ ಸಚಿವಾಲಯ ಮಾಹಿತಿ ನೀಡಿದೆ.ಸಮಾರಂಭಕ್ಕೂ ಮುನ್ನ, ನಿರ್ಗಮಿಸುವ ಅಧ್ಯಕ್ಷರು ಮತ್ತು ಅಧ್ಯಕ್ಷರಾಗಿ ಆಯ್ಕೆಯಾದವರು ವಿಧ್ಯುಕ್ತ ಮೆರವಣಿಗೆಯಲ್ಲಿ ಸಂಸತ್ತಿಗೆ ಆಗಮಿಸುತ್ತಾರೆ.

ಉಪ ರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು, ಪ್ರಧಾನ ಮಂತ್ರಿ ನರೇಂದ್ರ ಮೋದಿ, ಲೋಕಸಭೆ ಸ್ಪೀಕರ್ ಓಂ ಬಿರ್ಲಾ, ಸಚಿವರುಗಳು, ರಾಜ್ಯಪಾಲರು, ಮುಖ್ಯಮಂತ್ರಿಗಳು, ಸಂಸದರು, ರಾಜತಾಂತ್ರಿಕ ಕಾರ್ಯಗಳ ಮುಖ್ಯಸ್ಥರು, ಸಂಸದರು ಮತ್ತು ಸರ್ಕಾರದ ಪ್ರಧಾನ ನಾಗರಿಕ ಮತ್ತು ಮಿಲಿಟರಿ ಅಧಿಕಾರಿಗಳು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ಸಮಾರಂಭದ ಮುಕ್ತಾಯದ ನಂತರ ರಾಷ್ಟ್ರಪತಿಗಳು ರಾಷ್ಟ್ರಪತಿ ಭವನಕ್ಕೆ ತೆರಳುತ್ತಾರೆ, ಅಲ್ಲಿ ಅವರಿಗೆ ಸೇನಾ ಗೌರವ ನೀಡಲಾಗುತ್ತದೆ  ಮತ್ತು ನಿರ್ಗಮಿತ ರಾಷ್ಟ್ರಪತಿಗೂ ಗೌರವ ಸಲ್ಲಿಸಲಾಗುತ್ತದೆ.

64 ವರ್ಷದ ಮುರ್ಮು ಪ್ರತಿಪಕ್ಷ ಅಭ್ಯರ್ಥಿ ಯಶವಂತ ಸಿನ್ಹಾ ಅವರನ್ನು ಚುನಾವಣೆಯಲ್ಲಿ ಸೋಲಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಮುರ್ಮು ರಾಷ್ಟ್ರಪತಿ ಹುದ್ದೆ ಅಲಂಕರಿಸುತ್ತಿರುವ ಬುಡಕಟ್ಟು ಸಮುದಾಯದ ಮೊದಲನೇಯವರಾಗಿದ್ದಾರೆ ಹಾಗೂ ದೇಶದ ಎರಡನೇ ಮಹಿಳೆಯಾಗಿದ್ದಾರೆ.

SCROLL FOR NEXT