ದೇಶ

ಪಾರ್ಥ ಚಟರ್ಜಿ ಬಂಧನದ ಬಗ್ಗೆ ಮೌನ ಮುರಿದ ದೀದಿ: ತನಿಖಾ ಸಂಸ್ಥೆ ಬಳಸಿಕೊಂಡು ಪಕ್ಷ ಒಡೆಯಲು ಸಾಧ್ಯವಿಲ್ಲ ಎಂದ ಪಶ್ಚಿಮ ಬಂಗಾಳ ಸಿಎಂ

Lingaraj Badiger

ಕೋಲ್ಕತ್ತಾ: ತಮ್ಮ ಸಂಪುಟದ ಸಚಿವ ಪಾರ್ಥ ಚಟರ್ಜಿ ಬಂಧನ ವಿಚಾರಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕೊನೆಗೂ ಮೌನ ಮುರಿದಿದ್ದಾರೆ. “ನಾನು ಭ್ರಷ್ಟಾಚಾರ ಅಥವಾ ಯಾವುದೇ ತಪ್ಪನ್ನು ಬೆಂಬಲಿಸುವುದಿಲ್ಲ” ಎಂದು ಸೋಮವಾರ ಹೇಳಿದ್ದಾರೆ. ಆದರೆ ಏಜೆನ್ಸಿಗಳನ್ನು ಬಳಸಿಕೊಂಡು ನನ್ನ ಪಕ್ಷವನ್ನು ಒಡೆಯಬಹುದು ಎಂದು ಬಿಜೆಪಿ ಭಾವಿಸಿದರೆ ಅದು ತಪ್ಪು ಎಂದು ದೀದಿ ತಿರುಗೇಟು ನೀಡಿದ್ದಾರೆ.

ಯಾರಾದರೂ ತಪ್ಪಿತಸ್ಥರೆಂದು ಕಂಡುಬಂದರೆ, ಅವರು ಶಿಕ್ಷೆಗೆ ಒಳಗಾಗಬೇಕು. ಆದರೆ ನನ್ನ ವಿರುದ್ಧ ಯಾವುದೇ ದುರುದ್ದೇಶಪೂರಿತ ಪ್ರಚಾರವನ್ನು ನಾನು ಖಂಡಿಸುತ್ತೇನೆ. ಸಮಯದ ಚೌಕಟ್ಟಿನೊಳಗೆ ಸತ್ಯ ಹೊರಬರಬೇಕು ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಮಮತಾ ಬ್ಯಾನರ್ಜಿಗೆ ತೀರಾ ಆಪ್ತರಾಗಿದ್ದ ಪಾರ್ಥ ಚಟರ್ಜಿ ಬಂಧನದ ಬಗ್ಗೆ ಕಳೆದ ಎರಡು ದಿನಗಳಿಂದ ಸಿಎಂ ಮಮತಾ ಬ್ಯಾನರ್ಜಿ ಮೌನ ವಹಿಸಿದ್ದರು.

ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದ ಹಣ ವರ್ಗಾವಣೆ ಆರೋಪದ ಮೇಲೆ ಬಂಗಾಳದ ಕೈಗಾರಿಕಾ ಸಚಿವ ಪಾರ್ಥ ಚಟರ್ಜಿ ಅವರನ್ನು ಶನಿವಾರ ಬಂಧಿಸಲಾಗಿದೆ. ಅವರು ಶಿಕ್ಷಣ ಸಚಿವರಾಗಿದ್ದಾಗ ಸರ್ಕಾರಿ ಶಾಲೆಗಳಲ್ಲಿ ಶಾಲಾ ಶಿಕ್ಷಕರು ಮತ್ತು ಸಿಬ್ಬಂದಿಗಳ ಅಕ್ರಮ ನೇಮಕಾತಿಯಲ್ಲಿ ಅವರ ಪಾತ್ರವಿದೆ ಎಂದು ಆರೋಪಿಸಲಾಗಿದೆ. ಪಾರ್ಥ ಚಟರ್ಜಿ ಅವರ ನಿಕಟವರ್ತಿ ಅರ್ಪಿತಾ ಮುಖರ್ಜಿ ಅವರ ಮನೆಯಲ್ಲಿ  20 ಕೋಟಿ ರೂ. ನಗದು ಪತ್ತೆಯಾಗಿದೆ.

ಪಾರ್ಥ ಚಟರ್ಜಿ ಬಂಧನದ ನಂತರ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಮೂರು ಬಾರಿ ಕರೆ ಮಾಡಿದ್ದರೂ ದೀದಿ ಕರೆಗೆ ಉತ್ತರಿಸಿರಲಿಲ್ಲ.

SCROLL FOR NEXT