ದೇಶ

ತಮ್ಮ ಮುಂದಿನ ನಡೆ ಏನೆಂಬುದನ್ನು ಬಹಿರಂಗಪಡಿಸಿದ ಯಶ್ವಂತ್ ಸಿನ್ಹಾ!

Srinivas Rao BV

ಕೋಲ್ಕತ್ತ: ಮಾಜಿ ಕೇಂದ್ರ ಸಚಿವ, ರಾಷ್ಟ್ರಪತಿ ಚುನಾವಣೆಯಲ್ಲಿ ವಿಪಕ್ಷಗಳ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಭವಗೊಂಡ ಯಶ್ವಂತ್ ಸಿನ್ಹಾ ತಮ್ಮ ಮುಂದಿನ ರಾಜಕೀಯ ನಡೆ ಏನೆಂಬುದನ್ನು ಬಹಿರಂಗಪಡಿಸಿದ್ದಾರೆ.
 
ಸಾರ್ವಜನಿಕ ಜೀವನದಲ್ಲಿ ಮುಂದೆ ತಮ್ಮ ಪಾತ್ರ ಏನಿರಲಿದೆ ಎಂಬುದನ್ನು ಇನ್ನೂ ನಿರ್ಧರಿಸಿಲ್ಲ ಎಂದಷ್ಟೇ ಹೇಳಿರುವ ಸಿನ್ಹಾ, ತಾವು ಯಾವುದೇ ಪಕ್ಷವನ್ನೂ ಸೇರುವುದಿಲ್ಲ. ಸ್ವತಂತ್ರವಾಗಿ ಉಳಿಯುತ್ತೇನೆ ಎಂಬುದನ್ನು ಖಚಿತಪಡಿಸಿದ್ದಾರೆ. 

ತೃಣಮೂಲ ಕಾಂಗ್ರೆಸ್ ನ ರಾಷ್ಟ್ರೀಯ ಉಪಾಧ್ಯಕ್ಷರಾಗಿದ್ದ ಯಶ್ವಂತ್ ಸಿನ್ಹಾ, ರಾಷ್ಟ್ರಪತಿ ಚುನಾವಣೆಯ ಹಿನ್ನೆಲೆಯಲ್ಲಿ ಪಕ್ಷ ತೊರೆದಿದ್ದರು. ಈಗ ಮತ್ತೆ ಟಿಎಂಸಿ ನಾಯಕರೊಂದಿಗೆ ಸಂಪರ್ಕದಲ್ಲಿದ್ದೀರಾ? ಎಂಬ ಪ್ರಶ್ನೆಗೆ ಸಿನ್ಹಾ ಅವರ ಉತ್ತರ ನಕಾರಾತ್ಮಕವಾಗಿತ್ತು. 

"ನನ್ನೊಂದಿಗೆ ಯಾರೂ ಮಾತನಾಡಿಲ್ಲ, ನಾನೂ ಯಾರೊಂದಿಗೂ ಮಾತನಾಡಿಲ್ಲ, ಟಿಎಂಸಿ ನಾಯಕರೊಬ್ಬರೊಂದಿಗೆ ವೈಯಕ್ತಿಕ ಆಧಾರದಲ್ಲಿ ಸಂಪರ್ಕದಲ್ಲಿದ್ದೇನೆ" ಎಂದು ತಿಳಿಸಿದ್ದಾರೆ. ಸಾರ್ವಜನಿಕ ಜೀವನದಲ್ಲಿ ಮುಂದೆ ನನ್ನ ಪಾತ್ರ ಏನಿರಲಿದೆ ಎಂಬುದನ್ನು ಇನ್ನಷ್ಟೇ ನಿರ್ಧರಿಸಬೇಕಿದೆ. ನನಗೆ ಈಗ 84 ವರ್ಷ. ಇನ್ನೆಷ್ಟು ದಿನ ಇವುಗಳನ್ನು ನಿಭಾಯಿಸಬಲ್ಲೆ ಎಂಬುದನ್ನು ನೋಡಬೇಕಿದೆ ಎಂದು ಮಾಜಿ ವಿತ್ತ ಸಚಿವರು ಹೇಳಿದ್ದಾರೆ. 

ಬಿಜೆಪಿಯ ಕಟುಟೀಕಾಕಾರರಾಗಿಯೇ ಗುರುತಿಸಿಕೊಂಡಿದ್ದ ಸಿನ್ಹಾ, 2021 ರ ಮಾರ್ಚ್ ನಲ್ಲಿ ಟಿಎಂಸಿ ಸೇರ್ಪಡೆಗೊಂಡಿದ್ದರು. 2018 ರಲ್ಲಿ ಅವರು ಬಿಜೆಪಿ ತೊರೆದಿದ್ದರು.

SCROLL FOR NEXT