ದೇಶ

ನ್ಯಾಷನಲ್ ಹೆರಾಲ್ಡ್ ಪ್ರಕರಣ: 6 ಗಂಟೆಗಳ ಕಾಲ ಸೋನಿಯಾ ಗಾಂಧಿ ವಿಚಾರಣೆ, ಮತ್ತೆ ನಾಳೆ ಹಾಜರಾಗುವಂತೆ ಸೂಚನೆ

Lingaraj Badiger

ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದ ಮನಿ ಲಾಂಡರಿಂಗ್ ಪ್ರಕರಣ ಸಂಬಂಧ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಮಂಗಳವಾರ ಸುಮಾರು 6 ಗಂಟೆಗಳ ಕಾಲ ವಿಚಾರಣೆ ಒಳಪಡಿಸಿದ ಜಾರಿ ನಿರ್ದೇಶನಾಲಯ(ಇಡಿ) ಬುಧವಾರ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಕಾಂಗ್ರೆಸ್ ನಾಯಕಿಗೆ ಸೂಚಿಸಲಾಗಿದೆ.

ಜುಲೈ 21 ರಂದು ಇಡಿ ಎರಡು ಗಂಟೆಗಳ ಕಾಲ ಸೋನಿಯಾ ಅವರನ್ನು ಪ್ರಶ್ನಿಸಿತ್ತು. ಕೋವಿಡ್‌ನಿಂದ ಚೇತರಿಸಿಕೊಳ್ಳುತ್ತಿರುವ ಕಾರಣ ಅವರ ಕೋರಿಕೆಯ ಮೇರೆಗೆ ದಿನದ ವಿಚಾರಣೆಯನ್ನು ಕೊನೆಗೊಳಿಸಿತ್ತು. ಇಂದು ಮತ್ತೆ ಎರಡನೇ ಸುತ್ತಿನ ವಿಚಾರಣೆಗೆ ಹಾಜರಾದ ಸೋನಿಯಾ ಗಾಂಧಿ ಅವರನ್ನು 6 ಗಂಟೆಗಳ ಕಾಲ ವಿಚಾರಣೆ ನಡೆಸಿ, ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ.

ನಾಳೆ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸೋನಿಯಾ ಗಾಂಧಿ ಅವರಿಗೆ ಸೂಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಂಗಳವಾರ ಸಂಜೆ 7 ಗಂಟೆಯವರೆಗೆ ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದ್ದು, ನಂತರ ಅವರು ಇಡಿ ಕೇಂದ್ರ ಕಚೇರಿಯಿಂದ ತೆರಳಿದರು ಎಂದು ಅವರು ಹೇಳಿದ್ದಾರೆ.

ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಪ್ರಿಯಾಂಕಾ ಗಾಂಧಿ ವಾದ್ರಾ ಹಾಗೂ ರಾಹುಲ್ ಗಾಂಧಿ ಅವರೊಂದಿಗೆ ಜಾರಿ ನಿರ್ದೇಶನಾಲಯ ಕಚೇರಿಗೆ ಸೋನಿಯಾ ಗಾಂಧಿ ಆಗಮಿಸಿದರು. ಸೋನಿಯಾ ಗಾಂಧಿ ತನಿಖೆ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ ಹಾಗೂ ಕಾಂಗ್ರೆಸ್ ಕೇಂದ್ರ  ಕಚೇರಿ ಸುತ್ತಮುತ್ತ ಬಿಗಿ ಬಂದೋಬಸ್ತ್ ಒದಗಿಸಲಾಗಿತ್ತು.

SCROLL FOR NEXT