ದೇಶ

ನ್ಯಾಷನಲ್ ಹೆರಾಲ್ಡ್ ಪ್ರಕರಣ: 12 ಗಂಟೆಗಳ ವಿಚಾರಣೆ ಅಂತ್ಯ, ಸೋನಿಯಾ ಗಾಂಧಿಗೆ ಸದ್ಯ ರಿಲೀಫ್

Ramyashree GN

ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಎದುರಿಸುತ್ತಿದ್ದ ವಿಚಾರಣೆ ಇಂದು ಅಂತ್ಯಗೊಂಡಿದೆ. ಕಳೆದ ಮೂರು ದಿನಗಳಿಂದ 12 ಗಂಟೆಗಳ ಕಾಲ ನಡೆದ ವಿಚಾರಣೆಯಲ್ಲಿ 100ಕ್ಕೂ ಅಧಿಕ ಪ್ರಶ್ನೆಗಳನ್ನು ಕೇಳಲಾಗಿದೆ.

ಮೂರನೇ ಸುತ್ತಿನ ವಿಚಾರಣೆಗಾಗಿ ಇಂದು ದೆಹಲಿಯ ಇ.ಡಿ ಕಚೇರಿಗೆ ಹಾಜರಾಗಿದ್ದ 75 ವರ್ಷದ ಸೋನಿಯಾ ಗಾಂಧಿ ಅವರನ್ನು 3 ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿದೆ. ಸದ್ಯ ಮತ್ತೆ ಅವರಿಗೆ ಸಮನ್ಸ್ ನೀಡಿಲ್ಲ.

ಮಂಗಳವಾರವೂ ಇ.ಡಿ ಕಚೇರಿಗೆ ಆಗಮಿಸಿದ್ದ ಸೋನಿಯಾ ಗಾಂಧಿ ಅವರು 6 ಗಂಟೆಗಳ ಕಾಲ ಇ.ಡಿ ಅಧಿಕಾರಿಗಳ ವಿಚಾರಣೆಯನ್ನು ಎದುರಿಸಿದ್ದರು. ಈ ವೇಳೆ ಅವರು ತುಂಬಾ ವೇಗವಾಗಿ ಕೇಳಿದ್ದ ಎಲ್ಲ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದರು ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಸೋನಿಯಾ ಗಾಂಧಿ ಅವರ ಪುತ್ರ ಮತ್ತು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರನ್ನು 5 ದಿನಗಳ ಕಾಲ ಇ.ಡಿ ವಿಚಾರಣೆ ನಡೆಸಿತ್ತು. ಈ ವೇಳೆ ಅವರಿಗೆ 150 ಪ್ರಶ್ನೆಗಳನ್ನು ಕೇಳಲಾಗಿತ್ತು ಎನ್ನಲಾಗಿದೆ.

ಇ.ಡಿ ವಿಚಾರಣೆಗೆ ಹಾಜರಾಗಿದ್ದ ಸೋನಿಯಾ ಗಾಂಧಿ ಅವರನ್ನು ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಮತ್ತು ತನಿಖೆಯಲ್ಲಿರುವ ಯಂಗ್ ಇಂಡಿಯನ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ಭಾಗಿಯಾಗಿರುವ ಬಗ್ಗೆ ಸುಮಾರು 30 ಪ್ರಶ್ನೆಗಳನ್ನು ಕೇಳಿದ್ದರು. ಸೋನಿಯಾ ಅವರ ಹೇಳಿಕೆಗಳನ್ನು ರಾಹುಲ್ ಗಾಂಧಿ ಅವರ ಹೇಳಿಕೆಗಳೊಂದಿಗೆ ಹೊಂದಿಸಲಾಗಿದ್ದು, ಯಂಗ್ ಇಂಡಿಯನ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ಇಬ್ಬರೂ ಹೆಚ್ಚಿನ ಠೇವಣಿದಾರರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೂರು ದಿನಗಳ ವಿಚಾರಣೆ ವೇಳೆಯಲ್ಲೂ ತಮ್ಮ ಔಷಧಗಳನ್ನು ತಂದಿದ್ದ ಪುತ್ರಿ ಪ್ರಿಯಾಂಕಾ ಗಾಂಧಿ ವಾದ್ರಾರೊಂದಿಗೆ ಸೋನಿಯಾ ಗಾಂಧಿ ಅವರು ಇ.ಡಿ ಕಚೇರಿಗೆ ತೆರಳಿದ್ದರು. ಈ ವೇಳೆ ವೈದ್ಯಕೀಯ ಸಿಬ್ಬಂದಿ ಕೂಡ ಇದ್ದರು.

ಈ ಮಧ್ಯೆ, ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಇ.ಡಿ ಪ್ರಶ್ನಿಸಿರುವುದನ್ನು ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ದೆಹಲಿಯ ಎಐಸಿಸಿ ಪ್ರಧಾನ ಕಚೇರಿಯಲ್ಲಿ ಪ್ರತಿಭಟನೆ ನಡೆಸಿದರು. ಬಿಜೆಪಿಯಿಂದ ಇ.ಡಿ ದುರ್ಬಳಕೆಯಾಗುತ್ದಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ಕಾರ್ಯಕರ್ತರು ಬುಧವಾರವೂ ದೇಶದಾದ್ಯಂತ ಪ್ರತಿಭಟನೆ ನಡೆಸಿದರು. ಕೆಲವೆಡೆ ಪೊಲೀಸರೊಂದಿಗೆ ಕಲಹ ಉಂಟಾಗಿತ್ತು.

SCROLL FOR NEXT