ದೇಶ

ಶಿಕ್ಷಕರ ನೇಮಕಾತಿ ಹಗರಣ: ಪಕ್ಷದ ಎಲ್ಲಾ ಹುದ್ದೆಗಳಿಂದಲೂ ಪಾರ್ಥ ಚಟರ್ಜಿ ವಜಾ

Lingaraj Badiger

ಕೋಲ್ಕತ್ತಾ: ಶಿಕ್ಷಕರ ನೇಮಕಾತಿ ಹಗರಣದಲ್ಲಿ ಬಂಧಿತರಾಗಿರುವ ಪಶ್ಚಿಮ ಬಂಗಾಳ ಮಾಜಿ ಸಚಿವ ಪಾರ್ಥ ಚಟರ್ಜಿ ಅವರನ್ನು ಪಕ್ಷದ ಎಲ್ಲಾ ಹುದ್ದೆಗಳಿಂದಲೂ ವಜಾಗೊಳಿಸಲಾಗಿದೆ ಮತ್ತು ಪಕ್ಷದಿಂದ ಅಮಾನತುಗೊಳಿಸಲಾಗಿದೆ ಎಂದು ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರು ಗುರುವಾರ ಹೇಳಿದ್ದಾರೆ.

ಪ್ರಕರಣದ ತನಿಖೆ ಮುಗಿಯುವವರೆಗೆ ಚಟರ್ಜಿ ಅವರನ್ನು ಪಕ್ಷದ ಎಲ್ಲಾ ಹುದ್ದೆಗಳಿಂದ ತೆಗೆದುಹಾಕಲಾಗಿದೆ. ಪಕ್ಷದ ಶಿಸ್ತು ಸಮಿತಿಯ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಚಟರ್ಜಿ ನಿರಪರಾಧಿ ಎಂದು ಸಾಬೀತಾದರೆ ಮಾತ್ರ ಅವರಿಗೆ ಮತ್ತೆ ಟಿಎಂಸಿಯ ಬಾಗಿಲು ತೆರೆಯಲಿದೆ ಎಂದು ಅಭಿಷೇಕ್ ಬ್ಯಾನರ್ಜಿ ತಿಳಿಸಿದ್ದಾರೆ.

ಪಾರ್ಥ ಚಟರ್ಜಿ ಅವರು ಸುಮಾರು ಎರಡು ದಶಕಗಳಿಂದ ಟಿಎಂಸಿಯ ಪ್ರಧಾನ ಕಾರ್ಯದರ್ಶಿಯಾಗಿದ್ದರು ಮತ್ತು ಈ ವರ್ಷದ ಆರಂಭದಲ್ಲಿ ಅವರನ್ನು ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರಾಗಿ ನೇಮಕ ಮಾಡಲಾಗಿತ್ತು.

ಇದಕ್ಕು ಮುನ್ನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು  ಪಾರ್ಥ ಚಟರ್ಜಿ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಿದ್ದರು.

SCROLL FOR NEXT