ದೇಶ

ಹಿಂಸಾಚಾರ: ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷರ ಬಂಧನ; ಶಾಂತಿ ಕಾಪಾಡುವಂತೆ ರಾಜ್ಯಪಾಲರ ಮನವಿ

Lingaraj Badiger

ಕೋಲ್ಕತಾ: ಪ್ರವಾದಿ ಮೊಹಮ್ಮದ್ ಕುರಿತು ಬಿಜೆಪಿ ನಾಯಕರ ಆಕ್ಷೇಪಾರ್ಹ ಹೇಳಿಕೆ ಖಂಡಿಸಿ ಶುಕ್ರವಾರ ಪಶ್ಚಿಮ ಬಂಗಾಳದಲ್ಲಿ ನಡೆದ ಪ್ರತಿಭಟನೆ ಹಿಂಸಾಚಾರಾಕ್ಕೆ ತಿರುಗಿದ್ದು, ಹಿಂಸಾಚಾರ ಪೀಡಿತ ಹೌರಾ ಜಿಲ್ಲೆಗೆ ತೆರಳುತ್ತಿದ್ದ ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ಸುಕಾಂತ ಮಜುಂದಾರ್ ಅವರನ್ನು ಶನಿವಾರ ಮಧ್ಯಾಹ್ನ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಉತ್ತರ ದಿನಾಜ್‌ಪುರದ ಬಲೂರ್‌ಘಾಟ್‌ ಬಿಜೆಪಿ ಸಂಸದರಾಗಿರುವ ಮಜುಂದಾರ್ ಅವರನ್ನು ವಿದ್ಯಾಸಾಗರ್ ಸೇತುವಿನ ಟೋಲ್ ಪ್ಲಾಜಾ ಬಳಿ ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.

"ಮಜುಂದಾರ್ ಅವರು ನಿಷೇಧಾಜ್ಞೆ ಜಾರಿಯಲ್ಲಿರುವ ಹೌರಾಕ್ಕೆ ಪ್ರಯಾಣಿಸಲು ಪ್ರಯತ್ನಿಸುತ್ತಿದ್ದರು. ಅವರ ಭೇಟಿಯಿಂದ ಕಾನೂನು ಮತ್ತು ಸುವ್ಯವಸ್ಥೆ ಹಾಳಾಗಬಹುದು ಎಂಬ ಉದ್ದೇಶದಿಂದ ಅವರನ್ನು ಬಂಧಿಸಲಾಗಿದೆ" ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

ಪಶ್ಚಿಮ ಬಂಗಾಳದ ಪರಿಸ್ಥಿತಿಯು ಕಾಶ್ಮೀರಕ್ಕಿಂತಲೂ ವೇಗವಾಗಿ ಬದಲಾಗುತ್ತಿದೆ. ಮೊದಲು ಅವರು ನನ್ನನ್ನು ನನ್ನ ಮನೆಯಲ್ಲಿ ತಡೆದರು. ನನ್ನನ್ನು ಗೃಹಬಂಧನದಲ್ಲಿ ಇರಿಸಲಾಯಿತು. ನಂತರ ಅವರು ನನ್ನ ನಿವಾಸದಿಂದ ಹೋಗಲು ಅವಕಾಶ ನೀಡಿದರು. ಈಗ ಮತ್ತೆ ವಿದ್ಯಾಸಾಗರ್ ಸೇತುವಿನ ಮೇಲೆ ನನ್ನನ್ನು ಬಂಧಿಸಿದ್ದಾರೆ ಎಂದು ಮಜುಂದಾರ್ ಹೇಳಿದ್ದಾರೆ.

ಇನ್ನು ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಡುತ್ತಿದೆ ಎಂದು ತೀವ್ರ ಕಳವಳ ವ್ಯಕ್ತಪಡಿಸಿದ ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧಂಕರ್ ಅವರು, ಕಾನೂನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಮುಖ್ಯಮಂತ್ರಿಮಮತಾ ಬ್ಯಾನರ್ಜಿ ಅವರಿಗೆ ಸೂಚಿಸಿದ್ದಾರೆ. ಅಲ್ಲದೆ ಶಾಂತಿ ಕಾಪಾಡುವಂತೆ ಜನತೆಯಲ್ಲಿ ಮನವಿ ಮಾಡಿದ್ದಾರೆ.

ಪ್ರವಾದಿ ಮೊಹಮ್ಮದ್ ಕುರಿತು ಅಮಾನತುಗೊಂಡಿರುವ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಅವರ ಅವಹೇಳನಕಾರಿ ಹೇಳಿಕೆ ಖಂಡಿಸಿ ಹೌರಾದ ಕೆಲವು ಭಾಗಗಳಲ್ಲಿ ಹಿಂಸಾಚಾರ ಭುಗಿಲೆದ್ದಿದೆ.

SCROLL FOR NEXT