ದೇಶ

ಪ್ರವಾದಿ ಬಗ್ಗೆ ಹೇಳಿಕೆ ವಿವಾದ: ಯುಪಿಯಲ್ಲಿ ಬುಲ್ಡೋಜರ್ ಕ್ರಮದ ವಿರುದ್ಧ 'ಸುಪ್ರೀಂ'ಗೆ ಜಮಿಯತ್ ಅರ್ಜಿ; 333 ಮಂದಿ ಬಂಧನ!

Vishwanath S

ನವದೆಹಲಿ: ಪ್ರವಾದಿ ಮೊಹಮ್ಮದ್ ಕುರಿತಂತೆ ವಿವಾದಾತ್ಮಕ ಹೇಳಿಕೆ ವಿರೋಧಿಸಿ ಜೂನ್ 10ರಂದು ಗಲಭೆ ಸೃಷ್ಟಿಸಿದ್ದವರ ಮನೆಗಳನ್ನು ಉತ್ತರ ಪ್ರದೇಶ ಸರ್ಕಾರ ನೆಲಸಮ ಮಾಡುತ್ತಿದ್ದು ಈ ಕ್ರಮವನ್ನು ನಿಲ್ಲಿಸುವಂತೆ ನಿರ್ದೇಶನ ನೀಡುವಂತೆ ಜಮಿಯತ್ ಉಲಮಾ-ಇ-ಹಿಂದ್ ಎಂಬ ಮುಸ್ಲಿಂ ಸಂಘಟನೆಯು ಸುಪ್ರೀಂ ಕೋರ್ಟ್‌ನಲ್ಲಿ ಎರಡು ಹೊಸ ಅರ್ಜಿಗಳನ್ನು ಸಲ್ಲಿಸಿದೆ. 

ಈ ಹಿಂದೆ ಸಹ ರಾಷ್ಟ್ರ ರಾಜಧಾನಿಯ ಜಹಾಂಗೀರ್‌ಪುರಿ ಪ್ರದೇಶದಲ್ಲಿನ ಕಟ್ಟಡಗಳನ್ನು ನೆಲಸಮಗೊಳಿಸುವ ವಿಷಯದ ಕುರಿತು ಸಂಘಟನೆಯೂ ಸುಪ್ರೀಂ ಕೋರ್ಟ್ ನಲ್ಲಿ ಸಲ್ಲಿಸಿತ್ತು. ಈ ವಿಷಯದಲ್ಲಿ ಕಳೆದ ವಿಚಾರಣೆಯ ನಂತರ ಕೆಲವು ಹೊಸ ಬೆಳವಣಿಗೆಗಳು ನಡೆದಿದ್ದು, ಈ ನ್ಯಾಯಾಲಯದ ಗಮನಹರಿಸಬೇಕು ಎಂದು ಹೊಸ ಅರ್ಜಿಯನ್ನು ಸಲ್ಲಿಸಿದೆ. 

ಅಮಾನತುಗೊಂಡಿರುವ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಹಾಗೂ ಪಕ್ಷದಿಂದ ಉಚ್ಛಾಟನೆಗೊಂಡಿರುವ ನವೀನ್ ಜಿಂದಾಲ್ ಪ್ರವಾದಿ ಮೊಹಮ್ಮದ್ ಕುರಿತಂತೆ ನೀಡಿದ್ದ ವಿವಾದಾತ್ಮಕ ಹೇಳಿಕೆ ವಿರೋಧಿಸಿ ಉತ್ತರಪ್ರದೇಶ ಕಾನ್ಪುರದಲ್ಲಿ ಪ್ರತಿಭಟನೆಗೆ ನಡೆಸಲಾಗಿತ್ತು. ನಂತರ ಇದು ಹಿಂಸಾಚಾರಕ್ಕೆ ತಿರುಗಿದ್ದು ಉದ್ರಿಕ್ತರು ಕಲ್ಲು ತೂರಾಟ ನಡೆಸಿದ್ದು ಹಲವು ಸಾರ್ವಜನಿಕ ಆಸ್ತಿ, ಪಾಸ್ತಿಗಳಿಗೆ ಹಾನಿ ಮಾಡಿದ್ದರು. 

ಹೀಗಾಗಿ ಯೋಗಿ ಸರ್ಕಾರ ಗಲಭೆಗೆ ಕುಮ್ಮಕ್ಕು ನೀಡಿದ್ದ ಮಾಸ್ಟರ್ ಮೈಂಡ್ ಗಳ ಮನೆಗಳನ್ನು ನೆಲಸಮಗೊಳಿಸುತ್ತಿದೆ. ಅಕ್ರಮ ನೆಲಸಮ ಕುರಿತಂತೆ ಸುಪ್ರೀಂ ಕೋರ್ಟ್ ಪ್ರಸ್ತುತ ವಿಷಯವನ್ನು ವಿಚಾರಣೆ ನಡೆಸುತ್ತಿರುವಾಗಲೇ ಇಂತಹ ಕಾನೂನುಬಾಹಿರ ಕ್ರಮಗಳನ್ನು ಅಳವಡಿಸಿಕೊಳ್ಳುವುದು ನೈಸರ್ಗಿಕ ನ್ಯಾಯದ ತತ್ವಗಳನ್ನು ಸ್ಪಷ್ಟವಾಗಿ ಉಲ್ಲಂಘಿಸುತ್ತದೆ ಎಂದು ಜಮಿಯಾತ್ ಮನವಿಯಲ್ಲಿ ಆರೋಪಿಸಿದೆ. 

ರಾಜ್ಯದಲ್ಲಿ ಜೂನ್ 10ರಂದು ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಪೊಲೀಸರು ರಾಜ್ಯದ ಎಂಟು ಜಿಲ್ಲೆಗಳಿಂದ 333 ಜನರನ್ನು ಬಂಧಿಸಿದ್ದಾರೆ.

SCROLL FOR NEXT