ದೇಶ

ಭಾರತದ ಪತ್ರಿಕಾ ಮಂಡಳಿ ಅಧ್ಯಕ್ಷರಾಗಿ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾ. ರಂಜನಾ ದೇಸಾಯಿ ನೇಮಕ

Srinivasamurthy VN

ನವದೆಹಲಿ: ಸುಪ್ರೀಂ ಕೋರ್ಟ್‍ನ ನಿವೃತ್ತ ನ್ಯಾಯಮೂರ್ತಿ ರಂಜನಾ ದೇಸಾಯಿ ಅವರನ್ನು ಭಾರತದ ಪತ್ರಿಕಾ ಮಂಡಳಿಯ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ.

ಭಾರತದ ಪತ್ರಿಕಾ ಮಂಡಳಿ ದೇಶದಲ್ಲಿ ಪತ್ರಿಕೆಗಳ ಸ್ವಯಂನಿಯಂತ್ರಣ ಸಂಸ್ಥೆಯಾಗಿ ಮತ್ತು ಕಾವಲುದಾರನಾಗಿ ಈ ಮಂಡಳಿ ಕಾರ್ಯ ನಿರ್ವಹಿಸುತ್ತದೆ. 2021ರ ನವೆಂಬರ್‌ ನಿಂದ ಈ ಹುದ್ದೆ ಖಾಲಿ ಇತ್ತು. ಈ ಹಿಂದೆ ಈ ಹುದ್ದೆಯಲ್ಲಿದ್ದ ನಿವೃತ್ತ ನ್ಯಾಯಮೂರ್ತಿ ಸಿ.ಕೆ.ಪ್ರಸಾದ್ ಅವರ ಸ್ಥಾನಕ್ಕೆ ಇವರು ನೇಮಕಗೊಂಡಿದ್ದಾರೆ.  ನಿವೃತ್ತ ನ್ಯಾಯಮೂರ್ತಿ ದೇಸಾಯಿಯವರು ಪ್ರಸ್ತುತ ಭಾರತದ ಕ್ಷೇತ್ರ ಪುನರ್ ವಿಂಗಡಣೆ ಸಮಿತಿಯ ಅಧ್ಯಕ್ಷರಾಗಿದ್ದರು. 

ಲೋಕಸಭಾ ಸ್ಪೀಕರ್, ರಾಜ್ಯಸಭಾ ಅಧ್ಯಕ್ಷ ಮತ್ತು ಪಿಸಿಐ ಸದಸ್ಯರು ಆಯ್ಕೆ ಮಾಡಿದ ಒಬ್ಬ ಪ್ರತಿನಿಧಿಯನ್ನು ಒಳಗೊಂಡ ಆಯ್ಕೆ ಸಮಿತಿ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಿದೆ. ನಿವೃತ್ತ ನ್ಯಾಯಮೂರ್ತಿ ದೇಸಾಯಿಯವರು ಈ ಮುನ್ನ ಮಹಾರಾಷ್ಟ್ರ ಸರ್ಕಾರದ ಸರ್ಕಾರಿ ಅಭಿಯೋಜಕರಾಗಿ ಮತ್ತು ಮುಂಬೈ ಹೈಕೋರ್ಟ್‍ನ ನ್ಯಾಯಮೂರ್ತಿಯಾಗಿ ಕಾರ್ಯ ನಿರ್ವಹಿಸಿದ್ದರು.

ದೇಶದಲ್ಲಿ ಮುದ್ರಣ ಮಾಧ್ಯಮದ ವಿರುದ್ಧ ಬಂದ ದೂರುಗಳನ್ನು ನಿಭಾಯಿಸುವ ಜತೆಗೆ ಪ್ರಸಾರ ಭಾರತಿಯ ಅಧ್ಯಕ್ಷರು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಯನ್ನು ನೇಮಕ ಮಾಡುವ ಶೋಧನಾ ಮತ್ತು ಆಯ್ಕೆ ಸಮಿತಿಯ ಸದಸ್ಯರಾಗಿಯೂ ಇವರು ಕಾರ್ಯ ನಿರ್ವಹಿಸಲಿದ್ದಾರೆ.

ಸೂರ್ಯಪ್ರಕಾಶ್ ಅವರ ಪದತ್ಯಾಗದ ಬಳಿಕ ಪ್ರಸಾರ ಭಾರತಿಯ ಮುಖ್ಯಸ್ಥರ ಹುದ್ದೆ ಖಾಲಿ ಇದ್ದು, ಕಳೆದ ವಾರ ಸಿಇಓ ಶಶಿ ಶೇಖರ್ ವೆಂಪತಿಯವರು ಐದು ವರ್ಷಗಳ ಅಧಿಕಾರಾವಧಿ ಪೂರ್ಣಗೊಳಿಸಿದ ಬಳಿಕ ಪದತ್ಯಾಗ ಮಾಡಿದ್ದರು.

SCROLL FOR NEXT