ದೇಶ

'ಭಾರತ್‌ ಗೌರವ್' ಯೋಜನೆಯಡಿ ಮೊದಲ ಖಾಸಗಿ ರೈಲು ಕಾರ್ಯಾರಂಭ

Srinivasamurthy VN

ಕೊಯಮತ್ತೂರು: ಭಾರತದ ಮೊದಲ ಖಾಸಗಿ ರೈಲು ಕಾರ್ಯಾರಂಭ ಮಾಡಿದ್ದು, ಈ ರೈಲು ಕೊಯಮತ್ತೂರು ಮತ್ತು ಶಿರಡಿ ನಡುವೆ ಸಂಚರಿಸುತ್ತದೆ.

ಭಾರತೀಯ ರೈಲ್ವೆ ಸೇವೆ ಆರಂಭವಾದ ಬಳಿಕ ಮೊದಲ ಬಾರಿಗೆ ಖಾಸಗಿ ಸಂಸ್ಥೆಗಳು ನಿರ್ವಹಿಸುವ ಪ್ರಯಾಣಿಕರ ರೈಲು ಸೇವೆ ಆರಂಭವಾಗಿದ್ದು, ಕೇಂದ್ರ ಸರ್ಕಾರದ “ಭಾರತ್‌ ಗೌರವ್”‌ ಯೋಜನೆಯಡಿ ಇದು ಚಾಲನೆಗೊಂಡಿರುವುದು ಗಮನಾರ್ಹ. ಈ ರೈಲು ಕೊಯಮತ್ತೂರು ಮತ್ತು ಶಿರಡಿ ನಡುವೆ ಸಂಚರಿಸುತ್ತದೆ. 

ಜೂನ್‌ 14ರ ಸಂಜೆ ಕೊಯಮತ್ತೂರಿನಲ್ಲಿ ಖಾಸಗಿ ರೈಲುಸೇವೆಗೆ ಚಾಲನೆ ದೊರೆತಿದ್ದು, ರೈಲು ತಮಿಳುನಾಡಿನ ಕೊಯಮತ್ತೂರು ಉತ್ತರ ರೈಲು ನಿಲ್ದಾಣದಿಂದ ಶಿರಡಿ ನಡುವೆ ಸಂಚರಿಸುತ್ತದೆ. ಶಿರಡಿಗೆ ತಲುಪುವ  ಮೊದಲು, ರೈಲು ತಿರುಪುರ್, ಈರೋಡ್, ಸೇಲಂ ಜೋಲಾರ್‌ಪೇಟ್, ಬೆಂಗಳೂರು ಯಲಹಂಕ, ಧರ್ಮಾವರ, ಮಂತ್ರಾಲಯ ರಸ್ತೆ (ನಿಲುಗಡೆ), ಮತ್ತು ವಾಡಿಯಲ್ಲಿ ನಿಲ್ಲುತ್ತದೆ.

ಖಾಸಗಿ ರೈಲಿನ  ದರಗಳು ಭಾರತೀಯ ರೈಲ್ವೇಗಳು ವಿಧಿಸುವ ನಿಯಮಿತ ರೈಲು ಟಿಕೆಟ್ ದರಗಳಿಗೆ ಸಮನಾಗಿರುತ್ತದೆ ಮತ್ತು ಶಿರಡಿ ಸಾಯಿ ಬಾಬಾ ದೇವಸ್ಥಾನದಲ್ಲಿ ವಿಶೇಷ ವಿಐಪಿ ದರ್ಶನವನ್ನು ಒದಗಿಸುತ್ತದೆ ಎಂದು ಹೇಳಲಾಗಿದೆ.

ದಕ್ಷಿಣ ರೈಲ್ವೇ ಮಜ್ದೂರ್ ಯೂನಿಯನ್‌ಗೆ ಸೇರಿದ ರೈಲ್ವೇ ನೌಕರರ ಗುಂಪು ಖಾಸಗಿ ರೈಲುಸೇವೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಖಾಸಗಿ ರೈಲು ಸೇವೆ ಭಾರತೀಯ ರೈಲ್ವೆಯನ್ನು ಖಾಸಗೀಕರಣಗೊಳಿಸುವ ಯೋಜನೆಯಾಗಿದೆ ಎಂದು ಅವರು ಆರೋಪಿಸಿದ್ದಾರೆ.

SCROLL FOR NEXT