ದೇಶ

'ನಾನು ಚೆನ್ನಾಗಿದ್ದೇನೆ, ಚಿಂತೆ ಮಾಡಬೇಡಿ': ಏರ್‌ಲಿಫ್ಟ್ ನಂತರ ಸುಪ್ರೀಂ ನ್ಯಾಯಾಧೀಶ ಎಂಆರ್ ಶಾ ವಿಡಿಯೋ ಸಂದೇಶ

Lingaraj Badiger

ನವದೆಹಲಿ: ಹಿಮಾಚಲ ಪ್ರದೇಶದಲ್ಲಿ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಎಂಆರ್‌ ಶಾ ಅವರಿಗೆ ಗುರುವಾರ ಹೃದಯಾಘಾತವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ವಿಮಾನದ ಮೂಲಕ ದೆಹಲಿಗೆ ಏರ್ ಲಿಫ್ಟ್ ಮಾಡಲಾಗಿದೆ.

ಎಂಆರ್ ಶಾ ಅವರನ್ನು ದೆಹಲಿ ಏರ್‌ಲಿಫ್ಟ್ ಮಾಡಲಾಗುತ್ತಿದೆ. ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.

ನ್ಯಾಯಮೂರ್ತಿ ಎಂಆರ್ ಶಾ ಅವರ ಕಚೇರಿ ವೀಡಿಯೊ ಸಂದೇಶ ಹಂಚಿಕೊಂಡಿದ್ದು, ಅದರಲ್ಲಿ ನ್ಯಾಯಾಧೀಶರು ಆರೋಗ್ಯವಾಗಿದ್ದಾರೆ ಮತ್ತು ಶೀಘ್ರದಲ್ಲೇ ದೆಹಲಿಗೆ ಬರಲಿದ್ದಾರೆ ಎಂದು ಹೇಳಲಾಗಿದೆ.

"ದೇವರ ದಯೆಯಿಂದ ನಾನು ಚೆನ್ನಾಗಿದ್ದೇನೆ, ನಾನು ಸ್ಥಿರವಾಗಿದ್ದೇನೆ.. ಚಿಂತಿಸಬೇಕಾಗಿಲ್ಲ. ನಾನು ದೆಹಲಿ ತಲುಪುತ್ತಿದ್ದೇನೆ ... ನೀವು ನನ್ನನ್ನು ನೋಡಬಹುದು, ನಾನು ಇಲ್ಲಿ ದರ್ಶನಕ್ಕೆ ಬಂದಿದ್ದೇನೆ. ನನ್ನ ಮತ್ತು ನನ್ನ ಕುಟುಂಬದವರೆಲ್ಲರ ಆಶೀರ್ವಾದದೊಂದಿಗೆ ಹೊರಡುತ್ತಿದ್ದೇನೆ.... ನಾಳೆ ಅಥವಾ ನಾಡಿದ್ದು ನಾನು ಸರಿಯಾಗುತ್ತೇನೆ ”ಎಂದು ಶಾ ಅವರು ವೀಡಿಯೊದಲ್ಲಿ ಹೇಳಿದ್ದಾರೆ.

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ಅವರು ಕೇಂದ್ರ ಗೃಹ ಸಚಿವಾಲಯದ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದು, ಶಾ ಅವರನ್ನು ಚಿಕಿತ್ಸೆಗಾಗಿ ದೆಹಲಿಗೆ ಕರೆತರಲು ಏರ್ ಆಂಬ್ಯುಲೆನ್ಸ್  ವ್ಯವಸ್ಥೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

"ಸುಪ್ರೀಂಕೋರ್ಟ್‌ನ ಗೌರವಾನ್ವಿತ ನ್ಯಾಯಮೂರ್ತಿ ಎಂಆರ್ ಶಾ ಅವರು ಹಿಮಾಚಲ ಪ್ರದೇಶದಲ್ಲಿ ಇದ್ದಾಗ ಹೃದಯಾಘಾತಕ್ಕೆ ಒಳಗಾಗಿದ್ದಾರೆ. ಅವರನ್ನು ತ್ವರಿತವಾಗಿ ದೆಹಲಿಗೆ ಕರೆತರಲು ವ್ಯವಸ್ಥೆಗಳನ್ನು ಮಾಡಲಾಗಿದೆ. ಅವರು ಬೇಗನೆ ಚೇತರಿಸಿಕೊಳ್ಳಲಿ ಎಂದು ದೇವರನ್ನು ಪ್ರಾರ್ಥಿಸುತ್ತೇನೆ" ಎಂದು ಸುಪ್ರೀಂಕೋರ್ಟ್ ವಕೀಲ ಮತ್ತು ಬಿಜೆಪಿ ವಕ್ತಾರ ಗೌರವ್ ಭಾಟಿಯಾ ಟ್ವೀಟ್ ಮಾಡಿದ್ದಾರೆ.

SCROLL FOR NEXT