ದೇಶ

ಅಗ್ನಿಪಥ್ ಸಂಘರ್ಷ: ಸುಳ್ಳು ಮಾಹಿತಿ ಪ್ರಸಾರ ಆರೋಪ, 35 ವಾಟ್ಸಪ್ ಗ್ರೂಪ್ ನಿಷೇಧ!

Srinivasamurthy VN

ನವದೆಹಲಿ: ಸೇನಾ ನೇಮಕಾತಿಯ ಅಗ್ನಿಪಥ್ ಯೋಜನೆ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು ಮುಂದುವರೆದಿರುವಂತೆಯೇ ಇತ್ತ ಸುಳ್ಳು ಮಾಹಿತಿ ಪ್ರಸಾರ ಮಾಡುತ್ತಿದ್ದ ಆರೋಪದ ಮೇರೆಗೆ 35 ವಾಟ್ಸಪ್ ಗ್ರೂಪ್ ಗಳನ್ನು ನಿಷೇಧಿಸಲಾಗಿದೆ.

ಅಗ್ನಿಪಥ್ ಸೇನಾ ನೇಮಕಾತಿ ಯೋಜನೆಯ ಬಗ್ಗೆ ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದ 35 ವಾಟ್ಸಾಪ್ ಗುಂಪುಗಳನ್ನು ಸರ್ಕಾರ ಭಾನುವಾರ ನಿಷೇಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೆಲವು ದಿನಗಳ ಹಿಂದೆ ಯೋಜನೆ ಘೋಷಣೆಯಾದಾಗಿನಿಂದ ದೇಶದ ವಿವಿಧ ಭಾಗಗಳಲ್ಲಿ ಯೋಜನೆಯ ವಿರುದ್ಧ ಹಿಂಸಾತ್ಮಕ ಪ್ರತಿಭಟನೆಗಳ ಮಧ್ಯೆಯೇ ಈ ಕ್ರಮವು ಬಂದಿದೆ.

ಆದಾಗ್ಯೂ, ಈ ಗುಂಪುಗಳ ಬಗ್ಗೆ ಮಾಹಿತಿ ಅಥವಾ ಅವುಗಳ ನಿರ್ವಾಹಕರ ವಿರುದ್ಧ ಯಾವುದೇ ಕ್ರಮವನ್ನು ಪ್ರಾರಂಭಿಸಲಾಗಿದೆಯೇ ಎಂದು ತಕ್ಷಣವೇ ತಿಳಿದಿಲ್ಲ. ವಾಟ್ಸ್‌ಆ್ಯಪ್‌ ಮೂಲಕ ಸುಳ್ಳು ಮಾಹಿತಿ ಹಬ್ಬಿಸುವುದು ಹಾಗೂ ಪ್ರತಿಭಟನೆಗಳನ್ನು ಆಯೋಜಿಸಿರುವ ಆರೋಪಗಳ ಮೇಲೆ ಕನಿಷ್ಠ 10 ಜನರನ್ನು ಬಂಧಿಸಿರುವುದಾಗಿ ವರದಿಯಾಗಿದೆ.

ಹರಿದಾಡುತ್ತಿರುವ ಮಾಹಿತಿಯ ನೈಜತೆಯನ್ನು ತಿಳಿಯಲು 'ಫ್ಯಾಕ್ಟ್‌ಚೆಕ್‌ಗಾಗಿ' ವಾಟ್ಸ್‌ಆ್ಯಪ್‌ ಸಂಖ್ಯೆ (8799711259) ತೆರೆದಿದೆ ಎಂದು ಹೇಳಲಾಗಿದೆ. ಅಗ್ನಿಪಥ ಯೋಜನೆಯನ್ನು ಖಂಡಿಸಿ ದೇಶದ ಹಲವು ಭಾಗಗಳಲ್ಲಿ ತೀವ್ರ ಪ್ರತಿಭಟನೆಗಳು ನಡೆಯುತ್ತಿದ್ದು, ರೈಲಿನ ಬೋಗಿಗಳಿಗೆ ಬೆಂಕಿ, ಸಾರ್ವಜನಿಕ ಆಸ್ತಿ–ಪಾಸ್ತಿ ಹಾನಿ, ರಸ್ತೆ ತಡೆ ನಡೆಸಲಾಗಿದೆ. ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಘರ್ಷಣೆ ನಡೆದು ಹಿಂಸಾಚಾರಕ್ಕೂ ಕಾರಣವಾಗಿದೆ. ಈ ನಡುವೆ ಸರ್ಕಾರವು 'ಸುಳ್ಳು ಸುದ್ದಿ' ತಡೆಯುವ ಕಾರ್ಯಾಚರಣೆ ನಡೆಸುತ್ತಿದೆ.

ಸಶಸ್ತ್ರ ಪಡೆಗಳಲ್ಲಿ ತಾರುಣ್ಯವನ್ನು ತರುವ ಯೋಜನೆಯ ಭಾಗ ಅಗ್ನಿಪಥ ಎಂದು ರಕ್ಷಣಾ ಪಡೆಗಳ ಉನ್ನತ ಅಧಿಕಾರಿಗಳು ಸಮರ್ಥಿಸಿಕೊಂಡಿದ್ದಾರೆ. ಈ ಯೋಜನೆಯನ್ನು ಹಿಂಪಡೆಯುವುದಿಲ್ಲ ಎಂದೂ ಭಾನುವಾರ ಸ್ಪಷ್ಟಪಡಿಸಿದ್ದಾರೆ.  
 

SCROLL FOR NEXT