ದೇಶ

ಜಮ್ಮು ಮತ್ತು ಕಾಶ್ಮೀರ: 2 ಪ್ರತ್ಯೇಕ ಎನ್ಕೌಂಟರ್​​ ನಲ್ಲಿ ಪಾಕಿಸ್ತಾನದ ಇಬ್ಬರು ಸೇರಿ 4 ಉಗ್ರರ ಹತ್ಯೆ

Srinivasamurthy VN

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ (Jammu and Kashmir) ಭಾನುವಾರ ನಡೆದ ಎರಡು ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ ( Indian Army encounter) ಇಬ್ಬರು ಪಾಕಿಸ್ತಾನಿ ಉಗ್ರರು ಸೇರಿದಂತೆ ನಾಲ್ವರು ಉಗ್ರರು ಹತರಾಗಿದ್ದಾರೆ. 

ದಕ್ಷಿಣ ಕಾಶ್ಮೀರದ ಕುಲ್ಗಾಮ್‌ನಲ್ಲಿ(Kulgam) ನಡೆದ ಎನ್ಕೌಂಟರ್ ನಲ್ಲಿ ಇಬ್ಬರು ಸ್ಥಳೀಯ ಉಗ್ರರು ಹತರಾಗಿದ್ದು, ಉತ್ತರ ಕಾಶ್ಮೀರದ ಕುಪ್ವಾರದಲ್ಲಿ ನಡೆದ ಮತ್ತೊಂದು ಎನ್ಕೌಂಟರ್ ನಲ್ಲಿ ಇಬ್ಬರು ಪಾಕಿಸ್ತಾನಿ ಉಗ್ರರನ್ನು ಹೊಡೆದುರುಳಿಸಲಾಗಿದೆ ಎಂದು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ. 

ಕುಪ್ವಾರದಲ್ಲಿ ಉಗ್ರಗಾಮಿಗಳು ಮತ್ತು ಸಶಸ್ತ್ರ ಪಡೆಗಳ ನಡುವೆ ಭಾರೀ ಗುಂಡಿನ ಚಕಮಕಿ ನಡೆಯುತ್ತಿದ್ದು, ಕುಲ್ಗಾಮ್‌ನಲ್ಲಿ ಉಗ್ರಗಾಮಿ ವಿರೋಧಿ ಕಾರ್ಯಾಚರಣೆಯೂ ನಡೆಯುತ್ತಿದೆ ಎಂದು ಸೇನಾ ಮೂಲಗಳು ತಿಳಿಸಿವೆ. ಭಾನುವಾರ ಮಧ್ಯಾಹ್ನ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮತ್ತು ಭಾರತೀಯ ಸೇನೆಯ ಜಂಟಿ ತಂಡವು ಕುಪ್ವಾರದ ಅರಣ್ಯದಲ್ಲಿ ಉಗ್ರ ಶೌಕತ್ ಅಹ್ಮದ್ ಶೇಖ್‌ನಿಂದ ಪಡೆದ ಮಾಹಿತಿ ನಂತರ ಕಾರ್ಯಾಚರಣೆಯನ್ನು ಪ್ರಾರಂಭಿಸಿತು ಎಂದು ಪೊಲೀಸರು ತಿಳಿಸಿದ್ದಾರೆ. 

ಶೇಖ್ ನ್ನು ಈ ಹಿಂದೆ ಕಾರ್ಯಾಚರಣೆಯಲ್ಲಿ ಬಂಧಿಸಲಾಗಿತ್ತು. ಈ ವೇಳೆ ದೊರೆತ ಮಾಹಿತಿಗಳ ಆಧಾರದ ಮೇಲೆ ಉಗ್ರರ ಅಡಗುತಾಣದ ಹುಡುಕಾಟದ ಸಂದರ್ಭದಲ್ಲಿ, ಉಗ್ರರು ಜಂಟಿ ಶೋಧನಾ ತಂಡದ ಮೇಲೆ ಗುಂಡಿನ ದಾಳಿ ಮಾಡಿದರು. ಈ ವೇಳೆ ಸೇನಾ ಸಿಬ್ಬಂದಿ ಪ್ರತಿದಾಳಿ ನಡೆಸಿದಾಗ ಎನ್ಕೌಂಟರ್ ಆರಂಭವಾಗಿದೆ. ಆರಂಭಿಕ ಗುಂಡಿನ ಚಕಮಕಿಯಲ್ಲಿ, ಒಬ್ಬ ಉಗ್ರ ಹತ್ಯೆಯಾಗಿದ್ದ. ನಂತರದ ಎನ್‌ಕೌಂಟರ್‌ನಲ್ಲಿ, ಇದುವರೆಗೆ ನಿಷೇಧಿತ ಭಯೋತ್ಪಾದಕ ಸಂಘಟನೆ ಎಲ್‌ಇಟಿಯ ಇಬ್ಬರು ಪಾಕಿಸ್ತಾನಿ ಭಯೋತ್ಪಾದಕರು ಹತರಾಗಿದ್ದಾರೆ. ಭಾರೀ ಗುಂಡಿನ ಚಕಮಕಿ ಇನ್ನೂ ನಡೆಯುತ್ತಿದ್ದು, ಕಾರ್ಯಾಚರಣೆ ಪ್ರಗತಿಯಲ್ಲಿದೆ ಎಂದು ಪೊಲೀಸರು ಹೇಳಿದ್ದಾರೆ.

ಮಹಿಳೆಯರು, ಮಕ್ಕಳು, ನಿರಾಯುಧ ಪೊಲೀಸರು ಮತ್ತು ಹೊರಗಿನ ಕಾರ್ಮಿಕರನ್ನು ಒಳಗೊಂಡ ಮುಗ್ಧ ನಾಗರಿಕರನ್ನು ಗುರಿಯಾಗಿಸುವ ಮೂಲಕ, ಕಣಿವೆಯಲ್ಲಿ ಶಾಂತಿಯನ್ನು ತರುವ ನಮ್ಮ ಪ್ರಯತ್ನಗಳನ್ನು ಭಯೋತ್ಪಾದಕರು ತಡೆಯಲು ಸಾಧ್ಯವಿಲ್ಲ. ನಮ್ಮ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯು ಎಲ್ಲಾ 3 ಪ್ರದೇಶಗಳಲ್ಲಿ, ವಿಶೇಷವಾಗಿ ವಿದೇಶಿ ಭಯೋತ್ಪಾದಕರ ವಿರುದ್ಧ ಏಕಕಾಲದಲ್ಲಿ ಮುಂದುವರಿಯುತ್ತದೆ ಎಂದು ಕಾಶ್ಮೀರ ಐಜಿಪಿ ಹೇಳಿದ್ದಾರೆ.

SCROLL FOR NEXT