ದೇಶ

'ಅಗ್ನಿಪಥ್' ವಿರುದ್ಧ ಪ್ರತಿಭಟನೆಗೆ ಕಾಂಗ್ರೆಸ್ ನಿರ್ಧಾರ, 62 ಲಕ್ಷ ಹುದ್ದೆ ಭರ್ತಿ ಮಾಡುವಂತೆ ಕೇಂದ್ರಕ್ಕೆ ಆಗ್ರಹ

Lingaraj Badiger

ಅಹಮದಾಬಾದ್: ಸಶಸ್ತ್ರ ಪಡೆಗಳ ನೇಮಕಾತಿಗಾಗಿ ಕೇಂದ್ರ ಸರ್ಕಾರ ಘೋಷಿಸಿದ 'ಅಗ್ನಿಪಥ' ಯೋಜನೆಯನ್ನು ಹಿಂಪಡೆಯುವಂತೆ ಆಗ್ರಹಿಸಿ ಸೋಮವಾರ ಗುಜರಾತ್ ನ ಎಲ್ಲಾ 182 ವಿಧಾನಸಭಾ ಕ್ಷೇತ್ರಗಳಲ್ಲಿ ಹಾಗೂ ದೇಶಾದ್ಯಂತ ಪ್ರತಿಭಟನೆ ನಡೆಸಲು ಕಾಂಗ್ರೆಸ್ ನಿರ್ಧರಿಸಿದೆ ಎಂದು ಪಕ್ಷದ ನಾಯಕಿ ಅಲ್ಕಾ ಲಂಬಾ ಅವರು ಭಾನುವಾರ ಹೇಳಿದ್ದಾರೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿ ಖಾಲಿ ಇರುವ 62 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಬೇಕು ಮತ್ತು ಪ್ರತಿಭಟನಾನಿರತ ಯುವಕರ ಮೇಲಿನ ಪ್ರಕರಣಗಳನ್ನು ಹಿಂಪಡೆಯುವುದು ಪಕ್ಷದ ಇತರ ಬೇಡಿಕೆಗಳಲ್ಲಿ ಸೇರಿದೆ ಎಂದು ಅವರು ತಿಳಿಸಿದ್ದಾರೆ.

'ಅಗ್ನಿಪಥ' ಯೋಜನೆ ವಿರುದ್ಧ ದೇಶದ ಎಲ್ಲಾ ಗ್ರಾಮಗಳು, ಜಿಲ್ಲೆಗಳು ಮತ್ತು ವಿಧಾನಸಭಾ ಕ್ಷೇತ್ರಗಳಲ್ಲಿ ಜೂನ್ 27 ರಂದು ಕಾಂಗ್ರೆಸ್ ಗಾಂಧಿ ಶೈಲಿಯಲ್ಲಿ ಪ್ರತಿಭಟನೆ ನಡೆಸಲಿದೆ. ಗುಜರಾತ್‌ನ 182 ವಿಧಾನಸಭಾ ಕ್ಷೇತ್ರಗಳಲ್ಲಿಯೂ ಪ್ರತಿಭಟನೆಗಳನ್ನು ಆಯೋಜಿಸಲಾಗುವುದು" ಎಂದು ಲಾಂಬಾ ತಿಳಿಸಿದ್ದಾರೆ.

“ಜೈ ಜವಾನ್, ಜೈ ಕಿಸಾನ್” ಘೋಷಣೆಯನ್ನು ಉಲ್ಲೇಖಿಸಿದ ಕಾಂಗ್ರೆಸ್, ದೇಶದಲ್ಲಿ ಜವಾನರಾಗಲಿ ಅಥವಾ ರೈತರಾಗಲಿ ಸಂತೋಷವಾಗಿಲ್ಲ ಎಂದು ಹೇಳಿದೆ.

"ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿ 62 ಲಕ್ಷ ಹುದ್ದೆಗಳು ಖಾಲಿ ಬಿದ್ದಿವೆ. ಇವುಗಳನ್ನು ತಕ್ಷಣವೇ ಭರ್ತಿ ಮಾಡಬೇಕು. ಈ 62 ಲಕ್ಷ ಹುದ್ದೆಗಳಲ್ಲಿ 2,55,000 ಹುದ್ದೆಗಳು ಭಾರತೀಯ ಸೇನೆಗೆ ಸೇರಿವೆ" ಎಂದು ಅವರು ತಿಳಿಸಿದ್ದಾರೆ.

SCROLL FOR NEXT