ದೇಶ

ಮುಂದಿನ ಕ್ರಮಗಳ ಬಗ್ಗೆ 'ಫಡ್ನವಿಸ್, ಶಿಂಧೆ ನಿರ್ಧರಿಸುತ್ತಾರೆ: ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ

Lingaraj Badiger

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಸ್ಥಾನಕ್ಕೆ ಉದ್ಧವ್ ಠಾಕ್ರೆ ಅವರು ರಾಜೀನಾಮೆ ನೀಡಿದ ನಂತರ ಬಿಜೆಪಿ ಪಾಳೆಯದಲ್ಲಿ ಸಂಭ್ರಮ ಮನೆ ಮಾಡಿದ್ದು, ಮುಂದಿನ ಕ್ರಮಗಳ ಬಗ್ಗೆ ಪ್ರತಿಪಕ್ಷ ನಾಯಕ ದೇವೇಂದ್ರ ಫಡ್ನವೀಸ್ ಮತ್ತು ಬಂಡಾಯ ಶಿವಸೇನೆ ನಾಯಕ ಏಕನಾಥ್ ಶಿಂಧೆ ಅವರು ನಿರ್ಧರಿಸಲಿದ್ದಾರೆ ಎಂದು ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ಚಂದ್ರಕಾಂತ್ ಪಾಟೀಲ್ ಅವರು ಬುಧವಾರ ರಾತ್ರಿ ಹೇಳಿದ್ದಾರೆ.

ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿರುವುದರಿಂದ ಬಿಜೆಪಿಯ ಮುಂದಿನ ನಡೆ ಏನು ಎಂಬ ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಪಾಟೀಲ್, ರಾಜ್ಯ ಬಿಜೆಪಿ ಘಟಕವು ತನ್ನ ಎಲ್ಲಾ ಶಾಸಕರನ್ನು ಮುಂಬೈಗೆ ಆಗಮಿಸುವಂತೆ ಸೂಚಿಸಿದೆ. ಮುಂದಿನ ಕ್ರಮಗಳ ಬಗ್ಗೆ ಫಡ್ನವಿಸ್ ಮತ್ತು ಏಕನಾಥ್ ಶಿಂಧೆ ನಿರ್ಧರಿಸುತ್ತಾರೆ ಎಂದು ತಿಳಿಸಿದರು.

ಗೆಲುವಿನಲ್ಲಿ ಬಿಜೆಪಿ ಕಾರ್ಯಕರ್ತರು ಸಂಯಮ ಪಾಲಿಸಬೇಕು ಎಂದು ಚಂದ್ರಕಾಂತ್ ಪಾಟೀಲ್ ಹೇಳಿದ್ದಾರೆ.

ಇನ್ನು ಪಕ್ಷದ ನಿಲುವನ್ನು ನಾಳೆ ಖಚಿತವಾಗಿ ಹೇಳುತ್ತೇನೆ ಎಂದು ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಈ ಮಧ್ಯೆ, ಇಂದು ರಾತ್ರಿ ಫಡ್ನವಿಸ್ ಅವರ ಅಧಿಕೃತ ನಿವಾಸದಲ್ಲಿ ಮತ್ತೊಂದು ಸುತ್ತಿನ ಸಭೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಏತನ್ಮಧ್ಯೆ, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ರಾಜೀನಾಮೆಯ ನಂತರ ಎಂವಿಎ ಸರ್ಕಾರ ಪತನಗೊಂಡಿದ್ದು, ಹಲವು ಬಿಜೆಪಿ ಶಾಸಕರು ಮತ್ತು ಹಿರಿಯ ನಾಯಕರು ಮುಂಬೈನ ಫಡ್ನವಿಸ್ ಅವರ ನಿವಾಸದಲ್ಲಿ ಜಮಾಯಿಸಿ ಪರಸ್ಪರ ಅಭಿನಂದಿಸಿದರು.

SCROLL FOR NEXT