ದೇಶ

ಅಮರನಾಥ ಯಾತ್ರೆ ಇಂದು ಆರಂಭ: ನುನ್ವಾನ್ ಮೂಲ ಶಿಬಿರದಿಂದ 2,750 ಯಾತ್ರಿಕರ ತಂಡ ಪಯಣ

Sumana Upadhyaya

ಜಮ್ಮು: ವಾರ್ಷಿಕ ಪವಿತ್ರ ಅಮರನಾಥ ಯಾತ್ರೆ ಇಂದು ಗುರುವಾರ ಪ್ರಾರಂಭವಾಗಿದೆ. 2,750 ಯಾತ್ರಾರ್ಥಿಗಳ ತಂಡ ಇಂದು ನಸುಕಿನ ಜಾವ ಮೂಲ ಶಿಬಿರದಿಂದ ಹೊರಟಿದ್ದು ಅನಂತ್ ನಾಗ್ ಜಿಲ್ಲೆಯ ಪಹಲ್ಗಾಮ್ ನ ನುನ್ವಾನ್ ಮೂಲ ಶಿಬಿರದಿಂದ ಜಿಲ್ಲಾಧಿಕಾರಿ ಪಿಯೂಷ್ ಸಿಂಗ್ಲ ಯಾತ್ರೆಗೆ ಚಾಲನೆ ನೀಡಿದರು.

ಅಮರನಾಥ ಯಾತ್ರಾರ್ಥಿಗಳ ಮೊದಲ ತಂಡಕ್ಕೆ ಜಮ್ಮು ಮತ್ತು ಕಾಶ್ಮೀರದ ಲೆಪ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಕಾಶ್ಮೀರ ಕಣಿವೆಯಲ್ಲಿ ನಿನ್ನೆ ಹಸಿರು ನಿಶಾನೆ ತೋರಿದ್ದರು. ಬಿಗಿ ಭದ್ರತಾ ವ್ಯವಸ್ಥೆ ನಡುವೆ ಜಮ್ಮುವಿನ ಭಗವತಿ ನಗರ ಮೂಲ ಶಿಬಿರದಿಂದ ಯಾತ್ರೆ ಆರಂಭವಾಯಿತು. ಕಾಶ್ಮೀರ ಕಣಿವೆಯಲ್ಲಿರುವ ಅಮರನಾಥ ಗುಹ ದೇವಾಲಯಕ್ಕೆ ಈ ವರ್ಷದ 43 ದಿನಗಳ ವಾರ್ಷಿಕ ಯಾತ್ರೆ ಇಂದಿನಿಂದ ಕಾಶ್ಮೀರ ಕಣಿವೆಯ ಪಹಲ್‌ಗಾಮ್ ಮತ್ತು ಬಲ್‌ತಾಲ್ ಮಾರ್ಗಗಳಿಂದ ಆರಂಭವಾಗಲಿದೆ.

ದಕ್ಷಿಣ ಕಾಶ್ಮೀರದ ಹಿಮಾಲಯದಲ್ಲಿರುವ ಮಂಜುಗಡ್ಡೆಯಿಂದ ನಿರ್ಮಿತವಾಗಿರುವ ಲಿಂಗದ ದರ್ಶನವನ್ನು ಮಾಡುವ ಪವಿತ್ರ ಯಾತ್ರೆ ಅಮರನಾಥ ಯಾತ್ರೆ ಅತ್ಯಂತ ಜನಪ್ರಿಯ, ಪ್ರತಿವರ್ಷ ಸಾವಿರಾರು ಮಂದಿ ಯಾತ್ರಿಕರು ಭೇಟಿ ನೀಡುತ್ತಾರೆ. ಶೀಶ್ನಗ್ ಮತ್ತು ಪಂಚತರ್ನಿ ಮಾರ್ಗವಾಗಿ ಬಹುತೇಕ ಕಾಲ್ನಡಿಗೆಯಲ್ಲಿ ಹೋಗುವ ಯಾತ್ರೆಗೆ ಮೂರು ದಿನ ರಾತ್ರಿ ಹಗಲು ತೆಗೆದುಕೊಳ್ಳುತ್ತದೆ.

43 ದಿನಗಳ ಅಮರನಾಥ ಯಾತ್ರೆ ಸುಗಮವಾಗಿ ಸಾಗಲು ಜಿಲ್ಲಾಡಳಿತ ಸಕಲ ವ್ಯವಸ್ಥೆ ಮಾಡಿದೆ. ಯಾತ್ರಿಗಳು ಶಾಂತಿಯಿಂದ ಸುಲಭವಾಗಿ ಭದ್ರತೆ, ಸುರಕ್ಷತೆಯೊಂದಿಗೆ ಹೋಗುವುದು ಮುಖ್ಯವಾಗಿದೆ ಎಂದು ಜಿಲ್ಲಾಧಿಕಾರಿ ಪಿಯೂಷ್ ಸಿಂಗ್ಲ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಅಮರನಾಥ ದೇಗುಲ ಮಂಡಳಿ(sasb) ಭಕ್ತಾದಿಗಳಿಗೆ ಆನ್ ಲೈನ್ ದರ್ಶನಕ್ಕೆ ವ್ಯವಸ್ಥೆ ಮಾಡಿದೆ.

SCROLL FOR NEXT