ದೇಶ

ಮಧ್ಯ ಪ್ರದೇಶ: ಕಾರಿನಲ್ಲಿ 40 ಪಿಸ್ತೂಲ್ ಸೇರಿ ಹಲವು ಅಕ್ರಮ ಶಸ್ತ್ರಾಸ್ತ್ರ ವಶ, ಆರೋಪಿಗಳು ಪರಾರಿ

Lingaraj Badiger

ಇಂದೋರ್‌: ಮಧ್ಯ ಪ್ರದೇಶದ ಖಾರ್ಗೋನ್ ಜಿಲ್ಲೆಯಲ್ಲಿ ಪೊಲೀಸರು ಸುದೀರ್ಘ ಚೇಸ್ ಮಾಡಿದ ನಂತರ ಕಾರಿನಲ್ಲಿ ಸಾಗಿಸುತ್ತಿದ್ದ 40 ಪಿಸ್ತೂಲ್‌ಗಳು ಮತ್ತು 36 ಮ್ಯಾಗಜೀನ್‌ಗಳು ಸೇರಿದಂತೆ ಹಲವು ಅಕ್ರಮ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಸೋಮವಾರ ಮುಂಜಾನೆ ಇಂದೋರ್‌ನ ರಾವು ಪ್ರದೇಶದಲ್ಲಿ ಆಗ್ರಾ-ಮುಂಬೈ ರಾಷ್ಟ್ರೀಯ ಹೆದ್ದಾರಿಯಲ್ಲಿ ಹರಿಯಾಣ ನೋಂದಣಿಯ ಕಾರನ್ನು ಪೊಲೀಸರು ತಡೆದರು ಎಂದು ಪೊಲೀಸ್ ಕಮಿಷನರ್ ಹರಿನಾರಾಯಣಚಾರಿ ಮಿಶ್ರಾ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಪೊಲೀಸರಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ಚಾಲಕ ಕಾರಿನ ವೇಗವನ್ನು ಹೆಚ್ಚಿಸಿ ಪರಾರಿಯಾಗುತ್ತಿದ್ದಾಗ ಪೊಲೀಸ್ ವಾಹನ ಡಿಕ್ಕಿ ಹೊಡೆಸಿ ತಡೆದಿದ್ದಾರೆ.

ನಿರಂತರ ಚೇಸ್ ಮತ್ತು ಪೊಲೀಸ್ ದಿಗ್ಬಂಧನದ ನಂತರ ಅಂತಾರಾಜ್ಯ ಗ್ಯಾಂಗ್‌ನ ದುಷ್ಕರ್ಮಿಗಳು ಖಾರ್ಗೋನ್ ಜಿಲ್ಲೆಯ ಸನವಾಡ್ ಪ್ರದೇಶದಲ್ಲಿ ಕಾರನ್ನು ಬಿಟ್ಟು ದಟ್ಟ ಅರಣ್ಯದೊಳಗೆ ಪರಾರಿಯಾಗಿದ್ದಾರೆ ಎಂದು ಅವರು ಹೇಳಿದ್ದಾರೆ.

ಹರಿಯಾಣ ನೋಂದಣಿ ಸಂಖ್ಯೆಯನ್ನು ಹೊಂದಿರುವ ವಾಹನದಿಂದ ಕನಿಷ್ಠ 40 ಪಿಸ್ತೂಲ್‌ಗಳು, 36 ಮ್ಯಾಗಜೀನ್‌ಗಳು ಮತ್ತು ಐದು ಕಾರ್ಟ್ರಿಡ್ಜ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

SCROLL FOR NEXT