ದೇಶ

ಕೇರಳ: ಕಾರಿಗೆ ಒರಗಿ ನಿಂತಿದ್ದ 6 ವರ್ಷದ ಬಾಲಕನ ಎದೆಗೆ ಒದ್ದ ವ್ಯಕ್ತಿ ಬಂಧನ

Manjula VN

ಕಣ್ಣೂರು: ತನ್ನ ಕಾರಿಗೆ ಒರಗಿ ನಿಂತಿದ್ದ 6 ವರ್ಷದ ಬಾಲಕನಿಗೆ ಕಾರಿನ ಮಾಲೀಕ ಕಾಲಿನಿಂದ ಎದೆಗೆ ಒದ್ದಿರುವ ಅಮಾನವೀಯ ಘಟನೆ ಕೇರಳದಲ್ಲಿ ನಡೆದಿದೆ.

ಬಾಲಕನಿಗೆ ಒದ್ದಿರುವ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದು, ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಕೇರಳ ಪೊಲೀಸರು ಆತನನ್ನು ಬಂಧಕ್ಕೊಳಪಡಿಸಿದ್ದಾರೆ.

ವೈರಲ್ ಆಗಿರುವ ವೀಡಿಯೋದಲ್ಲಿ 6 ವರ್ಷದ ಬಾಲಕನೊಬ್ಬ ಕಾರಿಗೆ ಒರಗಿ ನಿಂತಿರುವುದು ಕಂಡುಬಂದಿದೆ. ಇದನ್ನು ಗಮನಿಸಿ, ಕಾರಿನಿಂದ ಹೊರಗೆ ಬಂದ ವ್ಯಕ್ತಿ, ಬಾಲಕನಿಗೆ ಗದರಿ, ಎದೆಗೆ ಕಾಲಿನಿಂದ ಒದ್ದಿದ್ದಾನೆ. ಏನೂ ತಿಳಿಯದ ಬಾಲಕ ಸದ್ದಿಲ್ಲದೆ ಅಲ್ಲಿಂದ ದೂರ ಸರಿದಿದ್ದಾನೆ. ಬಳಿಕ ವ್ಯಕ್ತಿ ಮತ್ತೆ ಕಾರಿನೊಳಗೆ ಹೋಗಲು ಮುಂದಾದಾಗ ಈ ಎಲ್ಲಾ ಘಟನೆಯನ್ನು ವೀಕ್ಷಿಸಿದ ಆಟೋ ಚಾಲಕ ಹಾಗೂ ಸ್ಥಳೀಯು ಆತನನ್ನು ಸುತ್ತುವರಿದು ಪ್ರಶ್ನಿಸಿರುವುದು ವೀಡಿಯೋದಲ್ಲಿ ಕಂಡುಬಂದಿದೆ.

ವರದಿಗಳ ಪ್ರಕಾರ ಬಾಲಕ ರಾಜಸ್ಥಾನ ಮೂಲದ ವಲಸೆ ಕಾರ್ಮಿಕರ ಕುಟುಂಬದವನು ಎಂಬುದು ತಿಳಿದುಬಂದಿದೆ.

ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಪೊಲೀಸರು ಆರೋಪಿಯ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಇದರಂತೆ ಆರೋಪಿ ಪೊನ್ನಿಯಂಪಾಲಂ ನಿವಾಸಿ ಶಿಹಶಾದ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ಆತನನ್ನು ಬಂಧನಕ್ಕೊಳಪಡಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಮಕ್ಕಳ ಹಕ್ಕು ಆಯೋಗ ಪೊಲೀಸರಿಂದ ವರದಿ ಕೇಳಿದೆ. ಘಟನೆಯಲ್ಲಿ ಆಯೋಗ ಮಧ್ಯಪ್ರವೇಶಿಸಿ ಗಣೇಶ್ ಕುಟುಂಬಕ್ಕೆ ಗರಿಷ್ಠ ಬೆಂಬಲ ನೀಡಲಿದೆ ಎಂದು ಅಧ್ಯಕ್ಷ ಕೆವಿ ಮನೋಜ್ ಕುಮಾರ್ ಹೇಳಿದ್ದಾರೆ.

ಘಟನೆ ಸಂಬಂಧ ಪ್ರತಿಕ್ರಿಯೆ ನೀಡಿರುವ ಸಚಿವೆ ವೀಣಾ ಜಾರ್ಜ್ ಅವರು, "ಇದು ತುಂಬಾ ಕ್ರೂರ ಮತ್ತು ಆಘಾತಕಾರಿ" ಬಾಲಕ ಗಣೇಶ್'ಗೆ ಸೂಕ್ತ ಚಿಕಿತ್ಸೆ ಮತ್ತು ಕುಟುಂಬಕ್ಕೆ ಕಾನೂನು ಬೆಂಬಲವನ್ನು ನೀಡಲಾಗುತ್ತದೆ ಎಂದು ಹೇಳಿದ್ದಾರೆ.

SCROLL FOR NEXT