ದೇಶ

ಉಗ್ರರಿಗೆ ಆರ್ಥಿಕ ನೆರವು: ಕಾಶ್ಮೀರ ಪ್ರತ್ಯೇಕತಾವಾದಿ ನಾಯಕ ಶಬೀರ್ ಅಹ್ಮದ್ ಮನೆ ಜಪ್ತಿ ಮಾಡಿದ ಇಡಿ

Lingaraj Badiger

ನವದೆಹಲಿ: ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗೆ ಆರ್ಥಿಕ ನೆರವು ನೀಡಿದ ಪ್ರಕರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಕಾಶ್ಮೀರ ಪ್ರತ್ಯೇಕತಾವಾದಿ ನಾಯಕ ಶಬೀರ್ ಅಹ್ಮದ್ ಶಾ ಅವರ ಶ್ರೀನಗರದ ಮನೆಯನ್ನು ಜಪ್ತಿ ಮಾಡಿರುವುದಾಗಿ ಜಾರಿ ನಿರ್ದೇಶನಾಲಯ(ಇಜಿ) ಶುಕ್ರವಾರ ತಿಳಿಸಿದೆ.

ಶ್ರೀನಗರದ ಬರ್ಜುಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯ ಸನತ್ ನಗರದ ಬೋತ್‌ಶಾ ಕಾಲೋನಿಯಲ್ಲಿರುವ 21.80 ಲಕ್ಷ ರೂಪಾಯಿ ಮೌಲ್ಯದ ಮನೆ ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

2017 ರ ಮೇನಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಲಷ್ಕರ್-ಎ-ತೊಯ್ಬಾ ಮುಖ್ಯಸ್ಥ ಹಫೀಜ್ ಸಯೀದ್ ಮತ್ತು ಇತರರ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ(ಯುಎಪಿಎ)ಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಈ ಎಫ್‌ಐಆರ್‌ ನಲ್ಲಿ ಶಾ ಹೆಸರು ಸಹ ಉಲ್ಲೇಖವಾಗಿದ್ದರಿಂದ ಅವರ ವಿರುದ್ಧ ಮನಿ ಲಾಂಡರಿಂಗ್ ಪ್ರಕರಣ ದಾಖಲಿಸಲಾಗಿತ್ತು.

ಶಬೀರ್ ಅಹ್ಮದ್ ಶಾ ಕಾಶ್ಮೀರ ಕಣಿವೆಯಲ್ಲಿ ಕಲ್ಲು ತೂರಾಟ, ಪ್ರತಿಭಟನಾ ಮೆರವಣಿಗೆ, ಬಂದ್‌ಗಳು, ಹರತಾಳಗಳು ಮತ್ತು ಇತರ ವಿಧ್ವಂಸಕ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುವ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

SCROLL FOR NEXT