ದೇಶ

ಅಬಕಾರಿ ನೀತಿ ಹಗರಣ: ದೆಹಲಿ ಉಪ ಮುಖ್ಯಮಂತ್ರಿ ಸಿಸೋಡಿಯಾ ಅವರ ಪಿಎ ವಿಚಾರಣೆ ನಡೆಸಿದ ಜಾರಿ ನಿರ್ದೇಶನಾಲಯ

Ramyashree GN

ನವದೆಹಲಿ: ಈಗ ರದ್ದಾಗಿರುವ ಅಬಕಾರಿ ನೀತಿಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು (ಇ.ಡಿ) ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಆಪ್ತ ಸಹಾಯಕನನ್ನು ಶನಿವಾರ ವಿಚಾರಣೆಗೆ ಒಳಪಡಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತನಿಖಾ ಸಂಸ್ಥೆಯು ಸದ್ಯ ದೇವೇಂದ್ರ ಶರ್ಮಾ ಅವರನ್ನು ವಿಚಾರಣೆ ನಡೆಸುತ್ತಿದೆ ಮತ್ತು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳುತ್ತಿದೆ ಎಂದು ಅವರು ಹೇಳಿದರು.

ಇ.ಡಿ ತನ್ನ ವಿರುದ್ಧ 'ಸುಳ್ಳು' ಪ್ರಕರಣವನ್ನು ದಾಖಲಿಸಿದೆ, ನಂತರ ಅದು ತನ್ನ ಪಿಎ ಮನೆ ಮೇಲೆ ದಾಳಿ ಮಾಡಿ 'ಬಂಧನ' ಮಾಡಿದೆ ಎಂದು ಸಿಸೋಡಿಯಾ ಟ್ವೀಟ್‌ನಲ್ಲಿ ಹೇಳಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಇ.ಡಿ ಈವರೆಗೆ ಹಲವು ದಾಳಿಗಳನ್ನು ನಡೆಸಿದೆ.

ಸೆಪ್ಟೆಂಬರ್‌ನಲ್ಲಿ, ಇಂಡೋಸ್ಪಿರಿಟ್ ಎಂಬ ಮದ್ಯ ತಯಾರಿಕಾ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಸಮೀರ್ ಮಹಂದ್ರು ಅವರನ್ನು ಬಂಧಿಸಲಾಯಿತು.

ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸೋಡಿಯಾ ಅವರನ್ನು ಇ.ಡಿ ತನ್ನ ಎಫ್ಐಆರ್‌ನಲ್ಲಿ ಆರೋಪಿ ಎಂದು ಹೆಸರಿಸಿಸಿದೆ. ಪ್ರಕರಣ ದಾಖಲಾದ ನಂತರ ಉಪಮುಖ್ಯಮಂತ್ರಿ ಮತ್ತು ದೆಹಲಿ ಸರ್ಕಾರದ ಕೆಲವು ಅಧಿಕಾರಿಗಳ ಕಚೇರಿಗಳ ಮೇಲೆ ಸಿಬಿಐ ದಾಳಿ ನಡೆಸಿತ್ತು.

ದೆಹಲಿಯ ಅಬಕಾರಿ ನೀತಿ 2021-22ರ ಅನುಷ್ಠಾನದಲ್ಲಿನ ಅಕ್ರಮಗಳ ಕುರಿತು ದೆಹಲಿ ಲೆಪ್ಟಿನೆಂಟ್ ಗವರ್ನರ್ ಸಿಬಿಐ ತನಿಖೆಗೆ ಶಿಫಾರಸು ಮಾಡಿದ್ದರು. ಈ ಸಂಬಂಧ ಎಲ್‌ಜಿ 11 ಅಬಕಾರಿ ಅಧಿಕಾರಿಗಳನ್ನು ಅಮಾನತುಗೊಳಿಸಿದ್ದಾರೆ.

SCROLL FOR NEXT