ದೇಶ

ದೆಹಲಿ ಸಿಎಂ ಪ್ರಚಾರದಲ್ಲಿ ಬ್ಯುಸಿ, ವಾಯು ಮಾಲಿನ್ಯದಿಂದ ರಕ್ಷಿಸಿಕೊಳ್ಳಲು ಮಾಸ್ಕ್‌ ಧರಿಸಿ: ಕೇಂದ್ರ ಆರೋಗ್ಯ ಸಚಿವ ಟಾಂಗ್

Manjula VN

ನವದೆಹಲಿ: ಅರವಿಂದ್ ಕೇಜ್ರಿವಾಲ್ ವಿರುದ್ಧ ವಾಗ್ದಾಳಿ ನಡೆಸಿದ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು, ದೆಹಲಿ ಮುಖ್ಯಮಂತ್ರಿಗಳು ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದು, ವಾಯು ಮಾಲಿನ್ಯದಿಂದ ರಕ್ಷಿಸಿಕೊಳ್ಳಲು ಮಾಸ್ಕ್ ಧರಿಸಿ ಎಂದು ದೆಹಲಿ ಜನತೆಗೆ ಸಲಹೆ ನೀಡಿದ್ದಾರೆ.

ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ವಾಯು ಮಾಲಿನ್ಯದಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ದೆಹಲಿಯ ಜನತೆಗೆ ಮಾಸ್ಕ್‌ ಧರಿಸುವಂತೆ ಒತ್ತಾಯಿಸುತ್ತಿದ್ದೇನೆ. ಏಕೆಂದರೆ, ಕೇಜ್ರಿವಾಲ್‌ ಅವರು ಗುಜರಾತ್‌ ಮತ್ತು ಹಿಮಾಚಲ ಪ್ರದೇಶದಲ್ಲಿ ಉಚಿತ ಕೊಡುಗೆಗಳ ಬಗ್ಗೆ ಮಾತನಾಡುವಲ್ಲಿ ಬ್ಯುಸಿ ಇದ್ದಾರೆ. ಕೋಟ್ಯಂತರ ದೆಹಲಿಯ ತೆರಿಗೆ ಹಣವನ್ನು ಈ ಎರಡು ರಾಜ್ಯಗಳಲ್ಲಿ ಜಾಹೀರಾತು ನೀಡಲು ವ್ಯಯಿಸುವಲ್ಲಿ ಬ್ಯುಸಿ ಇದ್ದಾರೆಂದು ಹೇಳಿದ್ದಾರೆ.

ರಾಜಧಾನಿಯಲ್ಲಿ ವಾಯು ಗುಣಮಟ್ಟವು ತೀವ್ರ ಹದಗೆಟ್ಟಿರುವ ಕಾರಣ ಇಲ್ಲಿನ ಪ್ರಾಥಮಿಕ ಶಾಲೆಗಳಿಗೆ ಶನಿವಾರದಿಂದ ರಜೆ ಘೋಷಿಸಲಾಗಿದೆ. ಮುಂದಿನ ಆದೇಶದ ವರೆಗೆ ಶಾಲೆ ತೆರೆಯುವಂತಿಲ್ಲ ಎಂದೂ ಹೇಳಿದೆ. ಇನ್ನು ಶೇ 50ರಷ್ಟು ಸಿಬ್ಬಂದಿಗೆ ಮನೆಯಲ್ಲಿಯೇ ಕೆಲಸ ಮಾಡಲು ಅವಕಾಶ ನೀಡಿದೆ.

ಖಾಸಗಿ ಕಚೇರಿಗಳಿಗೂ ಇದನ್ನೇ ಅನುಸರಿಸುವಂತೆ ಸಲಹೆ ನೀಡಿದೆ. ಮಾಲಿನ್ಯ ಪ್ರಮಾಣವು ಅಪಾಯಕರ ಮಟ್ಟಕ್ಕೆ ಹೆಚ್ಚಿರುವ ಹಿನ್ನೆಲೆ ಮತ್ತು ಆರೋಗ್ಯ ಸಮಸ್ಯೆಗಳನ್ನು ತಡೆಯುವ ನಿಟ್ಟಿನಲ್ಲಿ ದೆಹಲಿ ಸರ್ಕಾರ ಈ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ.

SCROLL FOR NEXT