ದೇಶ

ತಿನ್ನುತ್ತಿದ್ದ ಬಿರಿಯಾನಿ ಕೇಳಿದ ಪತ್ನಿಗೆ ಬೆಂಕಿ ಹಚ್ಚಿದ ಗಂಡ: ಪತಿಯನ್ನು ತಬ್ಬಿಕೊಂಡ ಹೆಂಡತಿ; ಮುಂದಾಗಿದ್ದು ಅನಾಹುತ

Vishwanath S

ಚೆನ್ನೈ: ತಮಿಳುನಾಡಿನ ರಾಜಧಾನಿ ಚೆನ್ನೈನಿಂದ ಹೃದಯ ವಿದ್ರಾವಕ ಪ್ರಕರಣವೊಂದು ಬೆಳಕಿಗೆ ಬಂದಿದೆ. ಬಿರಿಯಾನಿ ವಿವಾದದಲ್ಲಿ 74 ವರ್ಷದ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಜೀವಂತ ಸುಟ್ಟು ಹಾಕಿದ್ದಾನೆ. 

ಪತಿ ಬೆಂಕಿ ಹಚ್ಚಿದ ಬಳಿಕ ಪತ್ನಿ ಪತಿಯನ್ನು ಅಪ್ಪಿಕೊಂಡಿದ್ದು, ಇದರಿಂದ ಪತಿಯೂ ಬೆಂಕಿಗೆ ಆಹುತಿಯಾಗಿದ್ದಾನೆ. ಈ ಘಟನೆಯಲ್ಲಿ ಇಬ್ಬರೂ ಸುಟ್ಟು ಕರಕಲಾಗಿದ್ದಾರೆ. ಇದಾದ ನಂತರ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪತಿ-ಪತ್ನಿ ಇಬ್ಬರೂ ಸಾವನ್ನಪ್ಪಿದ್ದಾರೆ.

ಚೆನ್ನೈನ ಅಯನವರಂನಲ್ಲಿ ಈ ಘಟನೆ ನಡೆದಿದೆ. ಇಲ್ಲಿ ನಿವೃತ್ತ ರೈಲ್ವೆ ನೌಕರ ಕರುಣಾಕರನ್ ಮತ್ತು ಅವರ ಪತ್ನಿ ಪದ್ಮಾವತಿ ಟ್ಯಾಗೋ ನಗರದಲ್ಲಿ ವಾಸವಾಗಿದ್ದರು. ದಂಪತಿಗೆ 4 ಮಕ್ಕಳಿದ್ದು ನಗರದ ವಿವಿಧ ಭಾಗಗಳಲ್ಲಿ ವಾಸಿಸುತ್ತಿದ್ದಾರೆ. ಸೋಮವಾರ ರಾತ್ರಿ ದಂಪತಿಯ ಮನೆಯಿಂದ ಕಿರುಚಾಟವನ್ನು ಕೇಳಿದ ನೆರೆಹೊರೆಯವರು ಅಲ್ಲಿಗೆ ಓಡಿಬಂದರು. ಅಲ್ಲಿ ಗಂಡ ಹೆಂಡತಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದನ್ನು ಕಂಡ ಅವರು ದಂಪತಿಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಪೊಲೀಸರು ಮೊದಲು ಈ ಪ್ರಕರಣವನ್ನು ಆತ್ಮಹತ್ಯೆ ಎಂದು ಪರಿಗಣಿಸುತ್ತಿದ್ದರು. ಆದರೆ ಕಿಲ್ಪಾಕ್ ಆಸ್ಪತ್ರೆಯಲ್ಲಿ ಸಾಯುವ ಮೊದಲು ಪದ್ಮಾವತಿ ನೀಡಿದ ಕಾರಣ ತುಂಬಾ ಭಯಾನಕವಾಗಿದೆ. ಸೋಮವಾರ ರಾತ್ರಿ 8 ಗಂಟೆ ಸುಮಾರಿಗೆ ಕರುಣಾಕರನ್ ಬಿರಿಯಾನಿ ಖರೀದಿಸಿ ಒಬ್ಬರೇ ತಿನ್ನಲು ಆರಂಭಿಸಿದ್ದರು ಎಂದು ಪದ್ಮಾವತಿ ಪೊಲೀಸರಿಗೆ ತಿಳಿಸಿದ್ದಾರೆ. ನನಗೆ ಯಾಕೆ ಬಿರಿಯಾನಿ ತಂದಿಲ್ಲ ಎಂದು ಪದ್ಮಾವತಿ ಕರುಣಾಕರನ್ ಅವರಿಗೆ ಕೇಳಿದ್ದಾರೆ. ಅಲ್ಲದೆ ಗಂಡ ತಿನ್ನುತ್ತಿದ್ದ ಬಿರಿಯಾನಿ ಕೊಡುವಂತೆ ಕೇಳಿದ್ದರು. ಈ ವಿಚಾರವಾಗಿ ಇಬ್ಬರ ನಡುವೆ ವಾಗ್ವಾದ ನಡೆಯಿತು. ಇದೇ ವೇಳೆ ಕೋಪಗೊಂಡ ಕರುಣಾಕರನ್ ನನ್ನ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದರು ಎಂದು ಹೇಳಿದರು. 

ಈ ಸಂಬಂಧ ಅಯನವರಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಈ ಬೆಳವಣಿಗೆ ಕುರಿತು ತನಿಖಾಧಿಕಾರಿ ಮಾತನಾಡಿ, ದಂಪತಿಯ ನಾಲ್ವರು ಮಕ್ಕಳು ನಗರದ ವಿವಿಧ ಪ್ರದೇಶಗಳಲ್ಲಿ ವಾಸವಿದ್ದರು. ಮಕ್ಕಳೊಂದಿಗೆ ಇಲ್ಲದ ಕಾರಣ ಇಬ್ಬರೂ ಚಿಂತಾಕ್ರಾಂತರಾಗಿ ಸದಾ ಜಗಳವಾಡುತ್ತಿದ್ದರು. ಘಟನೆ ನಡೆದ ಕೂಡಲೇ ದಂಪತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲಿ ಕರುಣಾಕರನ್ ಶೇಕಡ 50 ಮತ್ತು ಅವರ ಪತ್ನಿ ಶೇಕಡ 65 ಸುಟ್ಟು ಹೋಗಿದ್ದರು. ಇದಾದ ಬಳಿಕ ಪದ್ಮಾವತಿ ಮಂಗಳವಾರ ಮೃತಪಟ್ಟರೆ ಕರುಣಾಕರನ್ ಬುಧವಾರ ಬೆಳಗ್ಗೆ ಸಾವನ್ನಪ್ಪಿದ್ದಾರೆ.

SCROLL FOR NEXT