ದೇಶ

ಹಿಮಾಚಲ ಪ್ರದೇಶ ಚುನಾವಣೆ: ಬೆಳಗ್ಗೆ 11 ಗಂಟೆಯವರೆಗೆ ಶೇ.17.98 ಮತದಾನ

Sumana Upadhyaya

ಶಿಮ್ಲಾ: ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಗೆ ಮತದಾನ ಮುಂದುವರಿಯುತ್ತಿದ್ದು, ಆಡಳಿತಾರೂಢ ಭಾರತೀಯ ಜನತಾ ಪಕ್ಷ ಮತ್ತು ವಿರೋಧ ಪಕ್ಷ ಕಾಂಗ್ರೆಸ್ ಮಧ್ಯೆ ನೇರ ಹಣಾಹಣಿ ಏರ್ಪಟ್ಟಿದೆ. ಇಂದು ಬೆಳಗ್ಗೆ 11 ಗಂಟೆಯವರೆಗೆ ಮೊದಲ ಮೂರು ಗಂಟೆಗಳಲ್ಲಿ ಶೇ 17.98ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಬಿಜೆಪಿ ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರುವ ಹುಮ್ಮಸ್ಸಿನಲ್ಲಿದೆ. ಬೆಳಗ್ಗೆ ಚಳಿಯಲ್ಲಿ ನಿಧಾನಗತಿಯಲ್ಲಿ ಆರಂಭವಾದ ಮತದಾನ ಪ್ರಕ್ರಿಯೆ ಕ್ರಮೇಣ ವೇಗವನ್ನು ಪಡೆದುಕೊಂಡಿತು, ಮೊದಲ ಗಂಟೆಯಲ್ಲಿ ಶೇ 5ರಷ್ಟು ಮಾತ್ರ ಮತದಾನವಾಗಿದೆ.

ಬೆಳಗ್ಗೆ 11 ಗಂಟೆಯವರೆಗೆ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಅವರ ತವರು ಜಿಲ್ಲೆ ಮಂಡಿಯಲ್ಲಿ ಗರಿಷ್ಠ ಶೇ.21.92ರಷ್ಟು ಮತದಾನವಾಗಿದೆ. ಇದುವರೆಗೆ ಸಿರ್ಮೂರ್ ಜಿಲ್ಲೆಯಲ್ಲಿ ಶೇ.21.66, ಸೋಲನ್ 20.28 ಮತ್ತು ಕಿನ್ನೌರ್ ಶೇ.20 ಮತದಾನವಾಗಿದೆ. ಲಾಹೌಲ್ ಮತ್ತು ಸ್ಪಿತಿ ಜಿಲ್ಲೆಯಲ್ಲಿ ಮೊದಲ ಮೂರು ಗಂಟೆಗಳಲ್ಲಿ ಶೇ.5ರಷ್ಟು ಕಡಿಮೆ ಮತದಾನವಾಗಿದೆ.

ಹಿಮಾಚಲ ಪ್ರದೇಶದ ಕಾಂಗ್ರೆಸ್ ಮುಖ್ಯಸ್ಥೆ ಪ್ರತಿಭಾ ಸಿಂಗ್ ಮತ್ತು ಅವರ ಪುತ್ರ ವಿಕ್ರಮಾದಿತ್ಯ ಸಿಂಗ್ ರಾಂಪುರದಲ್ಲಿ ಮತ ಚಲಾಯಿಸಿದರು. ಅವರು ಶಿಮ್ಲಾದ ಶನಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು.ಮಾಜಿ ಮುಖ್ಯಮಂತ್ರಿ ಪ್ರೇಮ್ ಕುಮಾರ್ ಧುಮಾಲ್, ಅವರ ಪುತ್ರ ಹಾಗೂ ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು ಇತರ ಕುಟುಂಬ ಸದಸ್ಯರೊಂದಿಗೆ ಹಮೀರ್‌ಪುರದಲ್ಲಿ ಮತ ಚಲಾಯಿಸಿದರು.

ಮಾಜಿ ಕೇಂದ್ರ ಸಚಿವ ಆನಂದ್ ಶರ್ಮಾ ಶಿಮ್ಲಾದಲ್ಲಿ ಮತ ಚಲಾಯಿಸಿದರೆ, ಸಿಎಲ್‌ಪಿ ನಾಯಕ ಮುಖೇಶ್ ಅಗ್ನಿಹೋತ್ರಿ ಮತ್ತು ಅವರ ಕುಟುಂಬ ಹರೋಲಿಯಲ್ಲಿ ಮತ ಚಲಾಯಿಸಿದರು, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಮತ್ತು ಅವರ ಪತ್ನಿ ಮಲ್ಲಿಕಾ ನಡ್ಡಾ ಬಿಲಾಸ್‌ಪುರದ ವಿಜಯಪುರದ ಮತಗಟ್ಟೆಯಲ್ಲಿ ಮತದಾನ ಮಾಡಿದರು.

SCROLL FOR NEXT