ದೇಶ

ಗುಜರಾತ್ ಚುನಾವಣೆ: 5, 6ನೇ ಪಟ್ಟಿಯಲ್ಲಿ 39 ಅಭ್ಯರ್ಥಿಗಳನ್ನು ಘೋಷಿಸಿದ ಕಾಂಗ್ರೆಸ್; ವಡ್ಗಾಂನಿಂದ ಜಿಗ್ನೇಶ್ ಮೇವಾನಿ ಸ್ಪರ್ಧೆ

Ramyashree GN

ನವದೆಹಲಿ: ಗುಜರಾತ್ ವಿಧಾನಸಭೆ ಚುನಾವಣೆಗೆ 39 ಅಭ್ಯರ್ಥಿಗಳ ಎರಡು ಪಟ್ಟಿಯನ್ನು ಕಾಂಗ್ರೆಸ್ ಭಾನುವಾರ ಬಿಡುಗಡೆ ಮಾಡಿದ್ದು, ವಡ್ಗಾಮ್ ಕ್ಷೇತ್ರದಿಂದ ಜಿಗ್ನೇಶ್ ಮೇವಾನಿ ಅವರನ್ನು ಕಣಕ್ಕಿಳಿಸಿದೆ.
ಜಿಗ್ನೇಶ್ ಮೇವಾನಿ ಅವರು ಗುಜರಾತ್‌ನ ಬನಸ್ಕಾಂತ ಜಿಲ್ಲೆಯ ವಡ್ಗಾಮ್ ಕ್ಷೇತ್ರದಿಂದ 2017 ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದರು.

ಕಾಂಗ್ರೆಸ್ ಇದೀಗ ತನ್ನ ಐದನೇ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ರಮೇಶ್ ಮೇರ್ ಬದಲಿಗೆ ಬೊಟಾಡ್‌ನಿಂದ ಮನ್ಹರ್ ಪಟೇಲ್ ಸೇರಿದಂತೆ ಆರು ಅಭ್ಯರ್ಥಿಗಳು ಪಟ್ಟಿಯಲ್ಲಿದ್ದಾರೆ. ನಂತರ ಸಂಜೆ, ತನ್ನ 33 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಈವರೆಗೆ ಘೋಷಿಸಲಾದ ಒಟ್ಟು ಅಭ್ಯರ್ಥಿಗಳ ಸಂಖ್ಯೆ 142ಕ್ಕೆ ಏರಿಕೆಯಾಗಿದೆ.

ಐದನೇ ಪಟ್ಟಿಯಲ್ಲಿ, ಮೋರ್ಬಿಯಿಂದ ಜಯಂತಿ ಜೆರಾಜಭಾಯ್ ಪಟೇಲ್, ಜಾಮ್‌ನಗರ ಗ್ರಾಮಾಂತರದಿಂದ ಜೀವನ್ ಕುಂಭರ್ವಾಡಿಯಾ, ಧ್ರಂಗಾಧ್ರದಿಂದ ಛತ್ತರಸಿಂಹ ಗುಂಜಾರಿಯಾ, ರಾಜ್‌ಕೋಟ್ ಪಶ್ಚಿಮದಿಂದ ಮನ್‌ಸುಖ್‌ಭಾಯ್ ಕಲಾರಿಯಾ ಮತ್ತು ಗರಿಯಾಧರ್‌ನಿಂದ ದಿವ್ಯೇಶ್ ಚಾವ್ಡಾ ಇದ್ದಾರೆ.

33 ಅಭ್ಯರ್ಥಿಗಳ ಆರನೇ ಪಟ್ಟಿಯಲ್ಲಿ, ವಡ್ಗಾಮ್ (ಎಸ್‌ಸಿ) ಕ್ಷೇತ್ರದಿಂದ ಜಿಗ್ನೇಶ್ ಮೇವಾನಿ, ಮಾನ್ಸಾದಿಂದ ಠಾಕೋರ್ ಮೋಹನ್‌ಸಿನ್, ಕಲೋಲ್‌ನಿಂದ ಬಲ್ದೇವ್‌ಜಿ ಠಾಕೋರ್, ಜಮಾಲ್‌ಪುರ್-ಖಾಡಿಯಾದಿಂದ ಇಮ್ರಾನ್ ಖೆಡಾವಾಲಾ, ಅಂಕ್ಲಾವ್‌ನಿಂದ ಅಮಿತ್ ಚಾವ್ಡಾ, ದಾಭೋಯ್‌ನಿಂದ ಬಾಲ್ ಕಿಶನ್ ಪಟೇಲ್ ಮತ್ತು ಜೆಟ್‌ಪುರ (ಎಸ್‌ಟಿ) ಕ್ಷೇತ್ರದಿಂದ  ಸುಖರಾಮ್‌ಭಾಯ್ ರತ್ವಾ ಸೇರಿದಂತೆ ಇತರ ಅಭ್ಯರ್ಥಿಗಳನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ.

ನವೆಂಬರ್ 4 ರಂದು ತನ್ನ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದ ಕಾಂಗ್ರೆಸ್, 43 ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ. ನವೆಂಬರ್ 10 ರಂದು ಪಕ್ಷವು 46 ಅಭ್ಯರ್ಥಿಗಳ ಮತ್ತೊಂದು ಪಟ್ಟಿಯನ್ನು ಹೊರತಂದಿತು. ಶುಕ್ರವಾರ ಏಳು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿತು. ಅದರಲ್ಲಿ ಮೊದಲು ಘೋಷಿಸಿದ ಅಭ್ಯರ್ಥಿಯ ಬದಲಿಗೆ ಮತ್ತೊಬ್ಬರನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿತ್ತು. ಒಂಬತ್ತು ಅಭ್ಯರ್ಥಿಗಳ ನಾಲ್ಕನೇ ಪಟ್ಟಿಯನ್ನು ಶನಿವಾರ ಬಿಡುಗಡೆ ಮಾಡಿದೆ.

ಎರಡು ದಶಕಗಳಿಗೂ ಹೆಚ್ಚು ಕಾಲ ಬಿಜೆಪಿ ಅಧಿಕಾರದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯಲು ಕಾಂಗ್ರೆಸ್ ಹವಣಿಸುತ್ತಿದೆ.

182 ಸದಸ್ಯ ಬಲದ ಗುಜರಾತ್ ವಿಧಾನಸಭೆಗೆ ಡಿಸೆಂಬರ್ 1 ಮತ್ತು 5 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಡಿಸೆಂಬರ್ 8 ರಂದು ಮತ ಎಣಿಕೆ ನಡೆಯಲಿದೆ.

SCROLL FOR NEXT