ದೇಶ

ಆಂಧ್ರಪ್ರದೇಶದ ಔಷಧ ತಯಾರಿಕಾ ಘಟಕದಲ್ಲಿ ಸ್ಫೋಟ; ತಾಂತ್ರಿಕ ದುರಸ್ತಿಗೆ ತೆರಳಿದ್ದ ಮೂವರು ಸಾವು

Ramyashree GN

ಅಮರಾವತಿ: ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಗೌರಿಪಟ್ನಂನಲ್ಲಿ ಔಷಧಿ ತಯಾರಿಕಾ ಘಟಕದಲ್ಲಿ ಸ್ಫೋಟ ಸಂಭವಿಸಿದ್ದು, ಮೂವರು ಸಾವಿಗೀಡಾಗಿದ್ದಾರೆ.

ಜಿಲ್ಲಾಧಿಕಾರಿ ಕೆ.ಮಾಧವಿ ಲತಾ ಅವರು ಮೃತರ ಕುಟುಂಬಕ್ಕೆ ತಲಾ 20 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.

ಘಟಕದಲ್ಲಿನ ನಿರ್ವಹಣಾ ಕೊರತೆಯೇ ಸ್ಫೋಟಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯಲ್ಲಿ ದೃಢಪಟ್ಟಿದ್ದು, ಪ್ರಕರಣದ ಹೆಚ್ಚಿನ ತನಿಖೆ ನಡೆಯುತ್ತಿದೆ.

ಗೌರಿಪಟ್ಟಣಂನಲ್ಲಿರುವ ವಿಷನ್ ಡ್ರಗ್ಸ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ಸಿಬ್ಬಂದಿ ತಾಂತ್ರಿಕ ಸಮಸ್ಯೆಯನ್ನು ಸರಿಪಡಿಸಲೆಂದು ಮುಂದಾಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

'ನೀರು ಮತ್ತು ರಾಸಾಯನಿಕಗಳನ್ನು ಮರುಬಳಕೆ ಮಾಡುವ ಪೈಪ್‌ಲೈನ್‌ನಲ್ಲಿ ತಾಂತ್ರಿಕ ಸಮಸ್ಯೆ ಕಂಡುಬಂದಿದೆ. ಹೆಚ್ಚಿನ ತಾಪಮಾನದಿಂದಾಗಿ ಉಂಟಾದ ಒತ್ತಡದಿಂದ ಪೈಪ್‌ಲೈನ್ ಸ್ಫೋಟಗೊಂಡಿದ್ದು, ಉಪ ವ್ಯವಸ್ಥಾಪಕರು, ಶಿಫ್ಟ್ ಇನ್‌ಚಾರ್ಜ್ ಮತ್ತು ರಸಾಯನಶಾಸ್ತ್ರಜ್ಞರು ಕೆಲಸದಲ್ಲಿದ್ದರು' ಎಂದು ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸ್ಫೋಟದ ಪ್ರಭಾವ ಎಷ್ಟರಮಟ್ಟಿಗಿತ್ತು ಎಂದರೆ, ಒಡೆದ ಗಾಜಿನ ಚೂರುಗಳು ಮತ್ತು ತಗಡಿನ ಹಾಳೆಗಳು ಹಾರಿ ಅಲ್ಲಿದ್ದ ಮೂವರಿಗೆ ಚುಚ್ಚಿವೆ. ಈ ವೇಳೆ ಘಟಕದಲ್ಲಿದ್ದ ಇತರ ಕಾರ್ಮಿಕರು ಈ ಮೂವರನ್ನು ಕೊವ್ವೂರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಆ ವೇಳೆಗಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಗೃಹ ಸಚಿವೆ ಟಿ. ವನಿತಾ ಅವರು ಆಸ್ಪತ್ರೆಗೆ ಭೇಟಿ ನೀಡಿ ಅನಾಹುತದ ಬಗ್ಗೆ ಅಧಿಕಾರಿಗಳನ್ನು ವಿಚಾರಿಸಿದ್ದಾರೆ.

SCROLL FOR NEXT