ದೇಶ

ಮೈಸೂರು-ಚೆನ್ನೈ ಮಾರ್ಗದ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಕರುವಿಗೆ ಡಿಕ್ಕಿ; ಮುಂಭಾಗಕ್ಕೆ ಹಾನಿ

Sumana Upadhyaya

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ನವೆಂಬರ್ 11ರಂದು ಚೆನ್ನೈ-ಬೆಂಗಳೂರು-ಮೈಸೂರು ಮಾರ್ಗದಲ್ಲಿ ದಕ್ಷಿಣ ಭಾರತದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಹಸಿರು ನಿಶಾನೆ ತೋರಿಸಿದ್ದರು. ಇದು ಕೂಡ ಜಾನುವಾರಿಗೆ ಡಿಕ್ಕಿ ಹೊಡೆದ ಪ್ರಸಂಗ ನಡೆದಿದೆ. 

ನಿನ್ನೆ ಗುರುವಾರ ತಮಿಳುನಾಡಿನ ಅರಕ್ಕೋಣಂನಲ್ಲಿ ಕರುವಿಗೆ ಡಿಕ್ಕಿ ಹೊಡೆದು ಅಪಘಾತದಿಂದ ರೈಲಿನಲ್ಲಿ ಡೆಂಟ್ ಕಾಣಿಸಿಕೊಂಡಿದೆ. ಅಪಘಾತಕ್ಕೀಡಾದ ಕರು ಮೃತಪಟ್ಟಿದೆ. ಅಪಘಾತ ಸಂಭವಿಸಿದಾಗ ರೈಲು ಗಂಟೆಗೆ 90 ಕಿ.ಮೀ ವೇಗದಲ್ಲಿ ಹೋಗುತ್ತಿತ್ತು ಎಂದು ಇಂಗ್ಲಿಷ್ ದೈನಿಕವೊಂದು ವರದಿ ಮಾಡಿದೆ.

ಘಾಟ್ ಸೆಕ್ಷನ್ ನಲ್ಲಿ ತಿರುವುಗಳನ್ನು ಪರಿಗಣಿಸಿ, ಅಧಿಕಾರಿಗಳು ವಂದೇ ಭಾರತ್ ಎಕ್ಸ್ ಪ್ರೆಸ್ ನ ಸರಾಸರಿ ವೇಗವನ್ನು ಗಂಟೆಗೆ 75 ರಿಂದ 77 ಕಿಲೋಮೀಟರ್‌ಗಳಿಗೆ ನಿಗದಿಪಡಿಸಿದ್ದಾರೆ, ದೇಶದಲ್ಲಿ ಇದುವರೆಗೆ ಪ್ರಾರಂಭಿಸಲಾದ ಐದು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ಸಂಚಾರದಲ್ಲಿ ದಕ್ಷಿಣ ಭಾರತದ ರೈಲಿನ ವೇಗ ನಿಧಾನವಾಗಿದೆ.

ಅಪಘಾತದ ನಂತರ ಹಾನಿಯನ್ನು ಪರಿಶೀಲಿಸಲು ರೈಲು ಕೆಲವು ನಿಮಿಷಗಳವರೆಗೆ ನಿಲುಗಡೆಯಾಗಿತ್ತು. ನಂತರ ಚೆನ್ನೈಗೆ ಪ್ರಯಾಣ ಬೆಳೆಸಿತು. ಕಳೆದ ಅಕ್ಟೋಬರ್‌ನಿಂದ ವಂದೇ ಭಾರತ್ ರೈಲಿನಲ್ಲಿ ಇದು ಐದನೇ ಅಪಘಾತವಾಗಿದೆ.

ಮಾಲೀಕರ ವಿರುದ್ಧ ಕ್ರಮ: ಭವಿಷ್ಯದಲ್ಲಿ ಈ ರೀತಿ ದನ-ಕರುಗಳಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಇಲಾಖೆಯು ಜಾನುವಾರುಗಳ ಮಾಲೀಕರನ್ನು ಪತ್ತೆಹಚ್ಚಿ, ಪ್ರಕರಣವನ್ನು ದಾಖಲಿಸುತ್ತದೆ, ಅಲ್ಲದೆ ಭಾರೀ ದಂಡವನ್ನು ವಿಧಿಸುತ್ತದೆ ಎಂದು ದಕ್ಷಿಣ ರೈಲ್ವೆಯ ಸಾರ್ವಜನಿಕ ಸಂಪರ್ಕ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ಪ್ರಕಟಣೆ ತಿಳಿಸಿದೆ.

ಜಾನುವಾರುಗಳು ಹಳಿ ದಾಟಿ ಅಪಘಾತವಾಗುವುದನ್ನು ತಪ್ಪಿಸಲು ಮುಂದಿನ ಆರು ತಿಂಗಳಲ್ಲಿ 1,000 ಕಿಲೋಮೀಟರ್ ವ್ಯಾಪ್ತಿಯಲ್ಲಿ ಗಡಿ ಗೋಡೆಯನ್ನು ನಿರ್ಮಿಸಲಾಗುವುದು ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಶ್ಣವ್ ಹೇಳಿದ್ದರು.

SCROLL FOR NEXT