ದೇಶ

ಭಾರತ್ ಜೋಡೋ ಯಾತ್ರೆಯ ಧನಾತ್ಮಕ ಶಕ್ತಿಗೆ ಸಾವರ್ಕರ್ ವಿರುದ್ಧದ ಟೀಕೆಯಿಂದ ರಾಹುಲ್ ನೀರೆರೆಚಿದ್ದಾರೆ: ಸಂಜಯ್ ರಾವುತ್

Ramyashree GN

ಮುಂಬೈ: ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆಯಿಂದ ಉಂಟಾದ ಸಕಾರಾತ್ಮಕ ಶಕ್ತಿಗೆ ರಾಹುಲ್ ಗಾಂಧಿಯವರು ಸ್ವಾತಂತ್ರ್ಯ ಹೋರಾಟಗಾರ ವಿಡಿ ಸಾವರ್ಕರ್ ಅವರನ್ನು ಟೀಕಿಸುವ ಮೂಲಕ ನೀರೆರೆಚಿದ್ದಾರೆ ಎಂದು ಉದ್ಧವ್ ಠಾಕ್ರೆ ಬಣದ ಶಿವಸೇನೆ ಸಂಸದ ಸಂಜಯ್ ರಾವುತ್ ಭಾನುವಾರ ತಿಳಿಸಿದ್ದಾರೆ.

ಪಕ್ಷದ ಮುಖವಾಣಿ ಸಾಮ್ನಾದಲ್ಲಿ ತಮ್ಮ ವಾರದ ಅಂಕಣ 'ರೋಖ್‌ಥೋಕ್'ನಲ್ಲಿ, ಜನರ ಭಾವನೆಗಳನ್ನು ಸ್ಪರ್ಶಿಸುವ ವಿಚಾರಗಳನ್ನೇ ರಾಹುಲ್ ಗಾಂಧಿ ಏಕೆ ತೆಗೆದುಕೊಳ್ಳುತ್ತಿದ್ದಾರೆ ಮತ್ತು ಈ ಮೂಲಕ ಗಮನವನ್ನು ಬೇರೆಡೆಗೆ ಸೆಳೆಯಲು ಬಿಜೆಪಿಗೆ ಅವಕಾಶ ನೀಡುತ್ತಿದ್ದಾರೆ ಎಂದಿದ್ದಾರೆ.

ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯ ಭಾಗವಾಗಿ ಪತ್ರಿಕಾಗೋಷ್ಠಿಯಲ್ಲಿ ಇತ್ತೀಚೆಗೆ ಮಾತನಾಡಿದ್ದ ರಾಹುಲ್ ಗಾಂಧಿ, ಸಾವರ್ಕರ್ ಅವರನ್ನು ಬಿಜೆಪಿ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ ಚಿಹ್ನೆ ಎಂದಿದ್ದರು.

ದಿವಂಗತ ಹಿಂದುತ್ವವಾದಿಯಾದ ಸಾವರ್ಕರ್ ಅವರು ಬ್ರಿಟಿಷ್ ಆಡಳಿತಗಾರರಿಗೆ ಸಹಾಯ ಮಾಡಿದರು ಮತ್ತು ಭಯದಿಂದ ಅವರಿಗೆ ಕ್ಷಮಾದಾನ ಅರ್ಜಿಯನ್ನು ಬರೆದರು ಎಂಬ ಮಾತುಗಳು ಟೀಕೆಗಳು ಮತ್ತು ಪ್ರತಿಭಟನೆಗಳಿಗೆ ಕಾರಣವಾಗಿದ್ದವು.

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇತ್ತೀಚೆಗೆ ಜಾಮೀನು ಪಡೆದಿರುವ ರಾವುತ್, 'ನಾನು ಮೂರು ತಿಂಗಳು ಜೈಲಿನಲ್ಲಿ ಕಳೆದಿದ್ದೇನೆ. ಅನೇಕ ಸ್ವಾತಂತ್ರ್ಯ ಹೋರಾಟಗಾರರನ್ನು ಆರ್ಥರ್ ರೋಡ್ ಜೈಲಿನಲ್ಲಿ (ಮುಂಬೈನಲ್ಲಿ) ಇರಿಸಲಾಗಿತ್ತು. ಜೈಲಿನಲ್ಲಿ ಸ್ಮಾರಕವಿದೆ. ಒಬ್ಬ ಸಾಮಾನ್ಯ ಕೈದಿಯಾಗಿ ಒಂದು ದಿನವೂ ಜೈಲಿನಲ್ಲಿ ಕಳೆಯುವುದು ಕಷ್ಟ. ಹೀಗಿರುವಾಗ, ಸಾವರ್ಕರ್ ಅವರು ಅಂಡಮಾನ್ ಸೆಲ್ಯುಲರ್ ಜೈಲಿನಲ್ಲಿ 10 ವರ್ಷಗಳಿಗಿಂತ ಹೆಚ್ಚು ಕಾಲ ಇದ್ದರು ಮತ್ತು ಅಪಾರ ಕಷ್ಟಗಳನ್ನು ಎದುರಿಸಿದರು ಎಂದರು.

ಬ್ರಿಟಿಷರು ಅಕ್ರಮ ಹಣ ವರ್ಗಾವಣೆಯ ಆರೋಪದಲ್ಲಿ ಅವರನ್ನು ಬಂಧಿಸಲಿಲ್ಲ. ಅವರು ಬ್ರಿಟಿಷ್ ಆಡಳಿತದ ವಿರುದ್ಧ ಸಶಸ್ತ್ರ ಕ್ರಾಂತಿಯ ಜ್ಯೋತಿಯನ್ನು ಬೆಳಗಿಸಿದರು. ಅದಕ್ಕಾಗಿಯೇ ಅವರನ್ನು ಅಂಡಮಾನ್ ಜೈಲಿಗೆ ಕಳುಹಿಸಿ ಶಿಕ್ಷೆ ವಿಧಿಸಲಾಯಿತು ಎಂದು ರಾವುತ್ ತಿಳಿಸಿದ್ದಾರೆ.

ಎರಡು ಜೀವಾವಧಿ ಶಿಕ್ಷೆ ಎಂದರೆ 50 ವರ್ಷಗಳ ಜೈಲು ಶಿಕ್ಷೆ ಎಂದರ್ಥ. ಸಾವರ್ಕರ್ ಅವರ ಸಹೋದರ ನಾರಾಯಣರಾವ್ ಅವರನ್ನು ಬೇಷರತ್ತಾಗಿ ಬಿಡುಗಡೆ ಮಾಡಲಾಯಿತು. ಆದರೆ, ಸಾವರ್ಕರ್ ಅವರನ್ನು ಷರತ್ತುಗಳ ಮೇಲೆ ಬಿಡುಗಡೆ ಮಾಡಲಾಯಿತು. ಇದನ್ನು ಕರುಣೆ ಎಂದು ಕರೆಯಲಾಗುವುದಿಲ್ಲ. ಸಾವರ್ಕರ್ ಅವರ ಪತ್ರವನ್ನು ಕರುಣೆ ಎಂದು ತಪ್ಪಾಗಿ ಅರ್ಥೈಸಲಾಗಿದೆ ಎಂದು ಲೇಖಕ ವೈ ಡಿ ಫಡ್ಕೆ ಅವರ ಪುಸ್ತಕದಲ್ಲಿ ಬರೆದಿರುವುದನ್ನು ಉಲ್ಲೇಖಿಸಿರುವ ರಾವುತ್, ಇದು ಜೈಲಿನಿಂದ ಬಿಡುಗಡೆಯಾಗುವ ಕಾರ್ಯತಂತ್ರದ ಕಾರ್ಯವಾಗಿದೆ ಎಂದು ಅವರು ಹೇಳಿದ್ದಾರೆ.

ತಾನು ಬ್ರಿಟಿಷ್ ಸರ್ಕಾರದೊಂದಿಗೆ ಸಹಕರಿಸಲು ಸಿದ್ಧನಿದ್ದೇನೆ ಎಂದು ಅವರು ಉಲ್ಲೇಖಿಸಿದ್ದರೂ, ಇದು ಜೈಲಿನಿಂದ ಬಿಡುಗಡೆಯಾಗುವ ಕಾರ್ಯತಂತ್ರದ ಭಾಗವಾಗಿದೆ ಮತ್ತು ಅದನ್ನು ಮಾತ್ರ ಮುಖಬೆಲೆಗೆ ತೆಗೆದುಕೊಳ್ಳಬಾರದು

ಮಹಾತ್ಮ ಗಾಂಧಿಯವರು ಕೂಡ 1920ರ ಮೇ 26 ರಂದು ಯಂಗ್ ಇಂಡಿಯಾದಲ್ಲಿ ತಮ್ಮ ಲೇಖನದ ಮೂಲಕ ಸಾವರ್ಕರ್ ಮತ್ತು ಅವರ ಸಹೋದರನನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದ್ದರು. 1923ರಲ್ಲಿ ನಡೆದ ಕಾಂಗ್ರೆಸ್‌ನ ವಾರ್ಷಿಕ ಸಮಾವೇಶವೂ ಸಾವರ್ಕರ್‌ರನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ನಿರ್ಣಯವನ್ನು ಅಂಗೀಕರಿಸಿತು ಎಂದಿದ್ದಾರೆ.

ಇಂದು ಹಲವು ನಾಯಕರು ಜಾರಿ ನಿರ್ದೇಶನಾಲಯಕ್ಕೆ (ಇ.ಡಿ) ಹೆದರಿ ಕೇಂದ್ರ ಸರ್ಕಾರಕ್ಕೆ ಶರಣಾಗಿದ್ದಾರೆ. ಪಕ್ಷ ಬದಲಿಸಿ ನಿಷ್ಠೆ ತೊರೆದಿದ್ದಾರೆ. ದೇಶದ ಸ್ವಾತಂತ್ರ್ಯಕ್ಕಾಗಿ ಸಾವರ್ಕರ್ 10 ವರ್ಷಕ್ಕೂ ಹೆಚ್ಚು ಕಾಲ ಅಂಡಮಾನ್ ಜೈಲಿನಲ್ಲಿ ನರಳಿದರು. ಸಾವರ್ಕರ್ ಅವರ ಟೀಕೆ ಭಾರತ್ ಜೋಡೋ ಯಾತ್ರೆಯ ಅಜೆಂಡಾ ಅಲ್ಲ ಎಂದು ಅವರು ಹೇಳಿದರು.

ಸಾವರ್ಕರ್ ವಿರುದ್ಧ ಮಾತನಾಡುವ ಮೂಲಕ ರಾಹುಲ್ ಗಾಂಧಿ ಅವರು ಭಾರತ್ ಜೋಡೋ ಯಾತ್ರೆಯಿಂದ ಉಂಟಾದ ಸಕಾರಾತ್ಮಕ ಶಕ್ತಿ ಮತ್ತು ಆತ್ಮವಿಶ್ವಾಸಕ್ಕೆ ನೀರೆರೆಚಿದ್ದಾರೆ ಎಂದು ರಾವುತ್ ಹೇಳಿದರು.

SCROLL FOR NEXT