ದೇಶ

ಶ್ರದ್ಧಾ ಕೊಲೆ ಪ್ರಕರಣ: ಆರೋಪಿಯ ಪಾಲಿಗ್ರಾಫ್ ಪರೀಕ್ಷೆಗೆ ನ್ಯಾಯಾಲಯದಿಂದ ಅನುಮತಿ ಪಡೆದ ದೆಹಲಿ ಪೊಲೀಸರು

Ramyashree GN

ನವದೆಹಲಿ: ತನ್ನ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದ ಶ್ರದ್ಧಾ ವಾಕರ್ ಅವರನ್ನು ಕೊಂದು ದೇಹವನ್ನು 36 ತುಂಡುಗಳನ್ನಾಗಿ ಮಾಡಿದ ಆರೋಪಿ ಅಫ್ತಾಬ್ ಅಮಿನ್ ಪೂನಾವಾಲಾನ ಪಾಲಿಗ್ರಾಫ್ ಪರೀಕ್ಷೆ ನಡೆಸಲು ನ್ಯಾಯಾಲಯ ಮಂಗಳವಾರ ದೆಹಲಿ ಪೊಲೀಸರಿಗೆ ಅನುಮತಿ ನೀಡಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪಾಲಿಗ್ರಾಫ್ ಪರೀಕ್ಷೆಗೆ ಅನುಮತಿ ಕೋರಿ ದೆಹಲಿ ಪೊಲೀಸರು ಸೋಮವಾರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

'ಹೌದು. ಪೂನಾವಾಲಾ ಅವರ ಪಾಲಿಗ್ರಾಫ್ ಪರೀಕ್ಷೆ ನಡೆಸಲು ನಾವು ದೆಹಲಿ ನ್ಯಾಯಾಲಯದಿಂದ ಅನುಮತಿ ಪಡೆದಿದ್ದೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

ಪಾಲಿಗ್ರಾಫ್ ಪರೀಕ್ಷೆ ಎಂದರೇನು?

ಪಾಲಿಗ್ರಾಫ್ ಪರೀಕ್ಷೆಯು ಆಕ್ರಮಣಶೀಲವಲ್ಲದ ತಂತ್ರವಾಗಿದ್ದು, ಇದನ್ನು ಸುಳ್ಳು ಪತ್ತೆ ಪರೀಕ್ಷೆ ಎಂದೂ ಸಹ ಕರೆಯಲಾಗುತ್ತದೆ. ಈ ಪರೀಕ್ಷೆಯಲ್ಲಿ ಸಾಧನಗಳನ್ನು ವ್ಯಕ್ತಿಗೆ ಹಾಕಲಾಗುತ್ತದೆ. ಬಳಿಕ ವ್ಯಕ್ತಿಗೆ ಘಟನೆಗೆ ಸಂಬಂಧಿಸಿದಂತೆ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಆ ಪ್ರಶ್ನೆಗಳಿಗೆ ಉತ್ತರಿಸಿದಾಗ ಗ್ರಾಫ್‌ನಲ್ಲಿನ ವ್ಯತ್ಯಾಸದಿಂದ ತೀರ್ಮಾನವನ್ನು ತೆಗೆದುಕೊಳ್ಳಲಾಗುತ್ತದೆ. ಇದರಲ್ಲಿ ಯಾವುದೇ ಔಷಧವನ್ನು ಬಳಸಲಾಗುವುದಿಲ್ಲ.

ಅಮೆರಿಕನ್ ಸೈಕಲಾಜಿಕಲ್ ಅಸೋಸಿಯೇಷನ್ ​​(ಎಪಿಎ) ಪ್ರಕಾರ, ಪಾಲಿಗ್ರಾಫ್ ಪರೀಕ್ಷೆಗಳು ವ್ಯಕ್ತಿಯ 'ಹೃದಯ ಬಡಿತ/ರಕ್ತದೊತ್ತಡ, ಉಸಿರಾಟ ಮತ್ತು ಚರ್ಮದ ವಾಹಕತೆಯನ್ನು' ಅಳೆಯುತ್ತದೆ ಮತ್ತು ದಾಖಲಿಸುತ್ತದೆ. ಇದರಿಂದ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ.

ಪರೀಕ್ಷೆಯ ಉದ್ದೇಶವು ಸಾಮಾನ್ಯವಾಗಿ ಒಬ್ಬ ವ್ಯಕ್ತಿಯು ಅಪರಾಧ ಮಾಡಿದ್ದಾನೆಯೇ ಅಥವಾ ಇಲ್ಲವೇ ಎಂಬುದನ್ನು ಸಾಬೀತುಪಡಿಸುವುದಾಗಿದೆ.

SCROLL FOR NEXT