ದೇಶ

ಅಸ್ಸಾಂ-ಮೇಘಾಲಯ ಗಡಿ ಹಿಂಸಾಚಾರ: ವಿವಾದ ಬಗೆಹರಿಸಲು ಬಿಜೆಪಿ ನೇತೃತ್ವದ ಒಕ್ಕೂಟ ವಿಫಲ; ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

Ramyashree GN

ನವದೆಹಲಿ: ಅಸ್ಸಾಂ-ಮೇಘಾಲಯ ಗಡಿಯಲ್ಲಿ ಸಂಭವಿಸಿದ ಹಿಂಸಾಚಾರದ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬುಧವಾರ ಬಿಜೆಪಿ ವಿರುದ್ಧ ಕಿಡಿಕಾರಿದ್ದು, ಬಿಜೆಪಿಯ ಈಶಾನ್ಯ ಪ್ರಜಾಸತ್ತಾತ್ಮಕ ಒಕ್ಕೂಟವು (ಎನ್ಇಡಿಎ) ಅಲ್ಲಿ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ ಮತ್ತು ಎರಡು ರಾಜ್ಯಗಳ ನಡುವಿನ ಗಡಿ ವಿವಾದವನ್ನು ಪರಿಹರಿಸಲು ಗೃಹ ಸಚಿವ ಅಮಿತ್ ಶಾ ಅವರನ್ನು ಕೋರಿದ್ದಾರೆ.

ಮಂಗಳವಾರ ಮುಂಜಾನೆ ವಿವಾದಿತ ಅಸ್ಸಾಂ-ಮೇಘಾಲಯ ಗಡಿಯಲ್ಲಿ ಅಕ್ರಮವಾಗಿ ಕಡಿದ ಮರಗಳನ್ನು ತುಂಬಿದ ಟ್ರಕ್‌ಅನ್ನು ಅಸ್ಸಾಂನ ಅರಣ್ಯ ಸಿಬ್ಬಂದಿ ತಡೆದ ನಂತರ ಹಿಂಸಾಚಾರದಲ್ಲಿ ಅರಣ್ಯ ಸಿಬ್ಬಂದಿ ಸೇರಿದಂತೆ ಆರು ಜನರು ಮೃತಪಟ್ಟಿದ್ದರು.

ಈ ಕುರಿತು ಟ್ವೀಟ್ ಮಾಡಿರುವ ಖರ್ಗೆ, 'ಅಸ್ಸಾಂ-ಮೇಘಾಲಯ ಗಡಿಯಲ್ಲಿ ನಡೆದ ಅಹಿತಕರ ಘಟನೆಯಿಂದ ತೀವ್ರ ದುಃಖವಾಗಿದೆ. 6 ಅಮೂಲ್ಯ ಜೀವಗಳು ಬಲಿಯಾಗಿವೆ. ಬಿಜೆಪಿ ನೇತೃತ್ವದ ಎನ್ಇಡಿಎ ಈಶಾನ್ಯದಲ್ಲಿ ವಿಫಲವಾಗಿದೆ. ಎರಡು ರಾಜ್ಯಗಳ ನಡುವಿನ ಗಡಿ ವಿವಾದವನ್ನು ಇನ್ನಷ್ಟು ಪ್ರತಿಕೂಲಗೊಳಿಸುವ ಮೊದಲು ಕೇಂದ್ರ ಗೃಹ ಸಚಿವರು ಈ ಸಮಸ್ಯೆಯನ್ನು ಪರಿಹರಿಸಬೇಕು. ಶಾಂತಿ ನೆಲೆಸಲಿ' ಎಂದಿದ್ದಾರೆ.

ಎನ್ಇಡಿಎ ಎಂಬುದು ಈ ಪ್ರದೇಶದ ಪ್ರಾದೇಶಿಕ ಪಕ್ಷಗಳೊಂದಿಗೆ ಮಾಡಿಕೊಂಡಿರುವ ಬಿಜೆಪಿ ನೇತೃತ್ವದ ರಾಜಕೀಯ ಒಕ್ಕೂಟವಾಗಿದೆ.

ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಶಾ ಮತ್ತು ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾರನ್ನು ಟ್ಯಾಗ್ ಮಾಡಿರುವ ಟ್ವೀಟ್‌ನಲ್ಲಿ ಬಿಜೆಪಿಯ ಮಿತ್ರ ಪಕ್ಷದ ಮೇಘಾಲಯ ಸಿಎಂ ಕಾನ್ರಾಡ್ ಸಂಗ್ಮಾ, ಅಸ್ಸಾಂ ಪೊಲೀಸರು ಮತ್ತು ಅರಣ್ಯ ಸಿಬ್ಬಂದಿ ಮೇಘಾಲಯಕ್ಕೆ ಪ್ರವೇಶಿಸಿ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದಾರೆ ಎಂದು ದೂರಿದ್ದಾರೆ.

ಆದಾಗ್ಯೂ, ಅಸ್ಸಾಂ ಅರಣ್ಯ ಇಲಾಖೆ ತಂಡವು ರಾಜ್ಯದ ಪಶ್ಚಿಮ ಕರ್ಬಿ ಅಂಗ್ಲಾಂಗ್ ಜಿಲ್ಲೆಯಲ್ಲಿ ಟ್ರಕ್ ಅನ್ನು ತಡೆದಿದ್ದಾರೆ. ನಂತರ ಮೇಘಾಲಯದ ಜನರ ತಂಡವು ರಾಜ್ಯದ ಅರಣ್ಯ ಸಿಬ್ಬಂದಿ ಮತ್ತು ಪೊಲೀಸರ ಮೇಲೆ ದಾಳಿ ನಡೆಸಿದೆ. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಅಸ್ಸಾಂ ಕಡೆಯಿಂದಲೂ ಗುಂಡಿನ ದಾಳಿಗೆ ಕಾರಣವಾಯಿತು ಎಂದು ರಾಜ್ಯದ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

SCROLL FOR NEXT