ದೇಶ

ಸೂರತ್‌: ಕಾರಿನಲ್ಲಿ ಸಾಗಿಸುತ್ತಿದ್ದ 75 ಲಕ್ಷ ರೂ. ಜಪ್ತಿ, ಕಾಂಗ್ರೆಸ್ ಮುಖಂಡರ ವಿಐಪಿ ಪಾಸ್ ಪತ್ತೆ

Lingaraj Badiger

ಅಹಮದಾಬಾದ್: ಗುಜರಾತ್ ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇದ್ದು, ನಿತ್ಯ ವಾಹನಗಳ ತಪಾಸಣೆ ನಡೆಸಲಾಗುತ್ತಿದೆ. ಬುಧವಾರ ಇನ್ನೋವಾ ಕಾರಿನಲ್ಲಿ ಸಾಗಿಸುತ್ತಿದ್ದ 75 ಲಕ್ಷ ರೂಪಾಯಿ ನಗದನ್ನು ಸ್ಟಾಟಿಕ್ ಸರ್ವೆಲೆನ್ಸ್ ತಂಡ (ಎಸ್‌ಎಸ್‌ಟಿ) ಜಪ್ತಿ ಮಾಡಿದೆ.

ಮಂಗಳವಾರ ರಾತ್ರಿ ಎಸ್ಎಸ್ ಟಿ ತಂಡ ಸೂರತ್ ನಗರದ ಮಹಿಧರ್ ಪುರ ಪ್ರದೇಶದಲ್ಲಿ ಜಡಖಾದಿ ಮೊಹಲ್ಲಾ ಬಳಿಯ ರಂಗ್ರೆಜ್ ಟವರ್‌ನಲ್ಲಿ ಮೂವರು ಪ್ರಯಾಣಿಕರಿದ್ದ ಕಾರನ್ನು ಅಡ್ಡಗಟ್ಟಿ ಶೋಧ ನಡೆಸಿದಾಗ 75 ಲಕ್ಷ ರೂ.ನಗದು ಪತ್ತೆಯಾಗಿದೆ.

ಇಬ್ಬರು ವ್ಯಕ್ತಿಗಳು - ದೆಹಲಿ ಮೂಲದ ಉದಯ್ ಗುರ್ಜರ್ ಮತ್ತು ಸೂರತ್‌ಗೆ ಸೇರಿದ ಮೊಹಮ್ಮದ್ ಫೈಜ್ ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಸಂದೀಪ್ ಎಂಬ ಮೂರನೇ ವ್ಯಕ್ತಿ ಪರಾರಿಯಾಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ತನಿಖೆಯ ವೇಳೆ ಇನ್ನೋವಾ ಕಾರನ್ನು ‘ವಿನಾಯಕ್ ಟ್ರಾವೆಲ್ಸ್’ ಹೆಸರಿನಲ್ಲಿ ನೋಂದಣಿಯಾಗಿರುವುದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.

ವಾಹನದಲ್ಲಿ ಬಿಎಂ ಸಂದೀಪ್ ಎಂಬ ಹೆಸರಿನ ವಿಐಪಿ ಕಾರ್ ಪಾಸ್‌ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಸೂರತ್ ರ್ಯಾಲಿಯ ಕರಪತ್ರಗಳು ಪತ್ತೆಯಾಗಿವೆ ಎಂದು ಎಸ್‌ಎಸ್‌ಟಿ ಅಧಿಕಾರಿಗಳು ತಿಳಿಸಿದ್ದಾರೆ. 

ಬಿಎಂ ಸಂದೀಪ್, ಎಐಸಿಸಿ ಕಾರ್ಯದರ್ಶಿ ಮತ್ತು ದಕ್ಷಿಣ ಗುಜರಾತ್ ವಲಯದ ಪಕ್ಷದ ಉಸ್ತುವಾರಿಯಾಗಿದ್ದಾರೆ.

ಇದು ಕಾಂಗ್ರೆಸ್ ನಾಯಕರ ಕೈವಾಡವನ್ನು ಸ್ಪಷ್ಟವಾಗಿ ಸೂಚಿಸುತ್ತದೆ ಎಂದು ಸೂರತ್ ಬಿಜೆಪಿ ಮಾಧ್ಯಮ ವಕ್ತಾರ ಜಗದೀಶ್ ಪಟೇಲ್ ಆರೋಪಿಸಿದ್ದಾರೆ. ಅಲ್ಲದೆ ಈ ಹಣ ಯಾರದ್ದು ಎಂಬುದು ಮುಂದಿನ ತನಿಖೆಯಿಂದ ಗೊತ್ತಾಗಲಿದೆ ಎಂದು ಹೇಳಿದ್ದಾರೆ.

ಬಿಜೆಪಿ ಆರೋಪಗಳನ್ನು ತಳ್ಳಿಹಾಕಿರುವ ಗುಜರಾತ್ ಕಾಂಗ್ರೆಸ್ ಅಧ್ಯಕ್ಷ ಜಗದೀಶ್ ಠಾಕೂರ್, ಇದು ಪಕ್ಷಕ್ಕೆ ಕೆಟ್ಟ ಹೆಸರು ತರುವ 'ಸಂಚು'. ಪೊಲೀಸರು ಪ್ರಕರಣದ ತನಿಖೆ ನಡೆಸಲಿ, ತಪ್ಪಿತಸ್ಥರು ಯಾರೇ ಆಗಿರಲಿ ಅವರಿಗೆ ಶಿಕ್ಷೆಯಾಗಬೇಕು. ಕಾಂಗ್ರೆಸ್ ಎಂದಿಗೂ ತಪ್ಪಿತಸ್ಥರನ್ನು ರಕ್ಷಿಸುವುದಿಲ್ಲ ಎಂದಿದ್ದಾರೆ.

SCROLL FOR NEXT