ದೇಶ

ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರಲು ಬಿಜೆಪಿ ಬದ್ಧ: ಅಮಿತ್ ಶಾ

Lingaraj Badiger

ನವದೆಹಲಿ: ಎಲ್ಲಾ ಪ್ರಜಾಸತ್ತಾತ್ಮಕ ಚರ್ಚೆಗಳು ಮುಗಿದ ನಂತರ ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ(ಯುಸಿಸಿ) ಜಾರಿಗೆ ತರಲು ಭಾರತೀಯ ಜನತಾ ಪಕ್ಷ ಬದ್ಧವಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ಹೇಳಿದ್ದಾರೆ.
  
ಟೈಮ್ಸ್ ಶೃಂಗಸಭೆಯಲ್ಲಿ ಯುಸಿಸಿ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಮಿತ್ ಶಾ, ಜನಸಂಘದ ದಿನಗಳಿಂದಲೂ ಯುಸಿಸಿ ಜಾರಿ ಬಗ್ಗೆ ಬಿಜೆಪಿ ಈ ದೇಶದ ಜನರಿಗೆ ಭರವಸೆ ನೀಡಿದೆ ಎಂದರು.

“ಬಿಜೆಪಿ ಮಾತ್ರವಲ್ಲ, ಸಂವಿಧಾನ ಸಭೆಯು ಸಂಸತ್ತು ಮತ್ತು ರಾಜ್ಯಗಳಿಗೆ ಸೂಕ್ತ ಸಮಯದಲ್ಲಿ ಯುಸಿಸಿ ಜಾರಿಗೆ ತರಲು ಸಲಹೆ ನೀಡಿತ್ತು. ಏಕೆಂದರೆ ಯಾವುದೇ ಜಾತ್ಯತೀತ ದೇಶಕ್ಕೆ ಕಾನೂನುಗಳು ಧರ್ಮದ ಆಧಾರದ ಮೇಲೆ ಇರಬಾರದು. ರಾಷ್ಟ್ರ ಮತ್ತು ರಾಜ್ಯ ಜಾತ್ಯತೀತವಾಗಿದ್ದರೆ, ಕಾನೂನು ಮಾತ್ರ ಧರ್ಮದ ಆಧಾರದ ಮೇಲೆ ಇರಲು ಹೇಗೆ ಸಾಧ್ಯ? ಎಂದು ಶಾ ಪ್ರಶ್ನಿಸಿದರು.

ಕಾಲಾನಂತರದಲ್ಲಿ, ಸಂವಿಧಾನ ಸಭೆಯು ಈ ಬದ್ಧತೆಯನ್ನು ಮರೆತುಬಿಡಲಾಯಿತು ಎಂದು ಗೃಹ ಸಚಿವರು ಹೇಳಿದ್ದಾರೆ.

ಬಿಜೆಪಿ ಹೊರತು ಪಡಿಸಿ ಯಾವುದೇ ಪಕ್ಷ ಏಕರೂಪ ನಾಗರಿಕ ಸಂಹಿತೆಯ ಪರವಾಗಿಲ್ಲ, ಪ್ರಜಾಪ್ರಭುತ್ವದಲ್ಲಿ ಆರೋಗ್ಯಕರ ಚರ್ಚೆ ಅಗತ್ಯ, ಈ ಬಗ್ಗೆ ಮುಕ್ತ ಮತ್ತು ಆರೋಗ್ಯಕರ ಚರ್ಚೆಯ ಅಗತ್ಯವಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದ್ದಾರೆ.

ಬಿಜೆಪಿ ಆಡಳಿತವಿರುವ ಮೂರು ರಾಜ್ಯಗಳಾದ ಹಿಮಾಚಲ ಪ್ರದೇಶ, ಉತ್ತರಾಖಂಡ ಮತ್ತು ಗುಜರಾತ್‌ನಲ್ಲಿ ಯುಸಿಸಿ ಜಾರಿಗೆ ಸಂಬಂಧ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದ್ದು, ಅಲ್ಲಿ ಜನ ತಮ್ಮ ಅಭಿಪ್ರಾಯಗಳನ್ನು ಮಂಡಿಸುತ್ತಿದ್ದಾರೆ ಎಂದು ಅಮಿತ್ ಶಾ ಹೇಳಿದ್ದಾರೆ.

SCROLL FOR NEXT