ದೇಶ

ಪಾಕಿಸ್ತಾನ ನೂತನ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ತಕ್ಷಣವೇ ಭಾರತಕ್ಕೆ ಸಮಸ್ಯೆ ಎಂದು ನಿರೀಕ್ಷಿಸಬೇಡಿ: ಮಾಜಿ ಹೈ ಕಮಿಷನರ್

Srinivas Rao BV

ನವದೆಹಲಿ: ಪಾಕಿಸ್ತಾನಕ್ಕೆ ಹೊಸದಾಗಿ ನೇಮಕವಾಗಿರುವ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ತಕ್ಷಣವೇ ಭಾರತಕ್ಕೆ ಸಮಸ್ಯೆಗಳನ್ನು ಹೆಚ್ಚಿಸುತ್ತಾರೆ ಎಂದು ಭಾವಿಸುವುದು ಬೇಡ ಎಂದು ಮಾಜಿ ಹೈ ಕಮಿಷನರ್ ಒಬ್ಬರು ಹೇಳಿಕೆ ನೀಡಿದ್ದಾರೆ. 

ನಿವೃತ್ತ ಭಾರತೀಯ ವಿದೇಶಾಂಗ ಸೆವೆಗಳ ಅಧಿಕಾರಿ, ಪಾಕಿಸ್ತಾನದ ಮಾಜಿ ಹೈಕಮಿಷನರ್ ಆಗಿದ್ದ ಶರತ್ ಸಭ್ರವಾಲ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿ, ಅಸಿಮ್ ಮುನೀರ್ ಗೆ ತಕ್ಷಣಕ್ಕೆ ಗಮನ ಹರಿಸಬೇಕಾದ ಅನೇಕ ಸಂಗತಿಗಳಿವೆ. ಆತ ಭಾರತಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ತಕ್ಷಣಕ್ಕೆ ಗಮನ ನೀಡುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. 

ಪಾಕಿಸ್ತಾನ ಈಗ ಗಂಭೀರ ರಾಜಕೀಯ ಹಾಗೂ ಆರ್ಥಿಕ ಬಿಕ್ಕಟ್ಟಿನಲ್ಲಿ ಮುಳುಗಿದೆ. ಇಮ್ರಾನ್ ಖಾನ್ ಅವರನ್ನು ಪದಚ್ಯುತಗೊಳಿಸಿದ ನಂತರ ಅಲ್ಲಿನ ಸೇನೆಯ ಘನತೆಯೂ ಕಡಿಮೆಯಾಗಿದೆ. 

ಬುಡಕಟ್ಟು ಜನಗಳಿರುವ ಪ್ರದೇಶಗಳು ಹಾಗೂ ಬಲೂಚಿಸ್ಥಾನದಲ್ಲಿ ಭಯೋತ್ಪಾದನೆ ದೊಡ್ಡ ಸವಾಲಾಗಿದ್ದು, ಪಾಕಿಸ್ತಾನ ತಾಲೀಬಾನ್ ಎಂದೇ ಗುರುತಿಸಿಕೊಂಡಿರುವ ತೆಹ್ರೀಕ್-ಎ- ತಾಲೀಬಾನ್ ಬಲೂಚಿಸ್ಥಾನದಲ್ಲಿ ಸಕ್ರಿಯವಾಗಿದೆ. 

ಹೊಸ ಸಿಒಎಎಸ್ ಸೇನೆಗೆ ಈಗಾಗಲೇ ಕಳೆದುಕೊಂಡಿರುವ ಗೌರವಗಳನ್ನು ಹಿಂಪಡೆಯುವಲ್ಲಿ ಸಹಾಯ ಮಾಡಬೇಕು ಅದೇ ಅವರ ಆದ್ಯತೆಯಾಗಿರಲಿದೆ ಎಂದು ಮಾಜಿ ರಾಯಭಾರಿಗಳು ಅಭಿಪ್ರಾಯಪಟ್ಟಿದ್ದಾರೆ. 

ನಾಲ್ಕು ಸ್ಟಾರ್ ಜನರಲ್ ಆಗಿರುವ ಅಸಿಮ್ ಮುನೀರ್, ಭಾರತ-ಪಾಕಿಸ್ತಾನ ಕದನ ವಿರಾಮವನ್ನು ಉಳಿಸಿಕೊಳ್ಳಲು ಸಹಾಯ ಮಾಡುವ ನಿರೀಕ್ಷೆ ಇದೆ.

ಇನ್ನು ಹೊಸ ಸೇನಾ ಮುಖ್ಯಸ್ಥರಿಗೂ ನಿರ್ಗಮಿತ ಪ್ರಧಾನಿ ಇಮ್ರಾನ್ ಖಾನ್ ಅವರ ಸಂಬಂಧಗಳ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಭಾರತೀಯ ಮಾಜಿ ರಾಯಭಾರಿ, ಆ ಬಗ್ಗೆ ಇನ್ನಷ್ಟೇ ಕಾದು ನೋಡಬೇಕಿದೆ ಎಂದು ಹೇಳಿದ್ದಾರೆ. 

SCROLL FOR NEXT