ದೇಶ

ಸಾಮೂಹಿಕ ಅತ್ಯಾಚಾರ ಪ್ರಕರಣದ 11 ಅಪರಾಧಿಗಳ ಬಿಡುಗಡೆ: ಸುಪ್ರೀಂ ಕೋರ್ಟ್ ಗೆ ಸಂತ್ರಸ್ಥೆ ಬಿಲ್ಕಿಸ್ ಬಾನೋ ಮೇಲ್ಮನವಿ

Sumana Upadhyaya

ನವದೆಹಲಿ: 2002ರ ಗೋಧ್ರಾ ಹತ್ಯಾಕಾಂಡ ಸಂದರ್ಭ ಸಾಮೂಹಿಕ ಅತ್ಯಾಚಾರ ಪ್ರಕರಣದ 11 ಮಂದಿ ಅಪರಾಧಿಗಳ ಬಿಡುಗಡೆ ಪ್ರಶ್ನಿಸಿ ಬಿಲ್ಕಿಸ್ ಬಾನೋ ಇಂದು ಬುಧವಾರ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದಾರೆ. 

2002 ರ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಯ ವಿನಾಯತಿ ಮತ್ತು ಅಪರಾಧಿಗಳ ಬಿಡುಗಡೆಯನ್ನು ಪ್ರಶ್ನಿಸಿ ಬಿಲ್ಕಿಸ್ ಬಾನೋ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಮತ್ತು ಆಕೆಯ ಕುಟುಂಬ ಸದಸ್ಯರನ್ನು ಕೊಂದಿದ್ದಕ್ಕಾಗಿ 11 ಮಂದಿಗೆ ಜೀವಾವಧಿ ಶಿಕ್ಷೆ ಆರಂಭದಲ್ಲಿ ವಿಧಿಸಲಾಗಿತ್ತು. 

ಕಳೆದ ಆಗಸ್ಟ್ 15 ಸ್ವಾತಂತ್ರ್ಯ ದಿನದಂದು ಗುಜರಾತ್ ಸರ್ಕಾರವು 11 ಮಂದಿ ಅಪರಾಧಿಗಳನ್ನು ಸನ್ನಡತೆ ಆಧಾರದ ಮೇಲೆ ಬಿಡುಗಡೆ ಮಾಡಿತು. ಈ ಕ್ರಮವು ರಾಷ್ಟ್ರವ್ಯಾಪಿ ಭಾರೀ ಆಕ್ರೋಶವನ್ನು ಹುಟ್ಟುಹಾಕಿತ್ತು. ಅದರಲ್ಲೂ ವಿಶೇಷವಾಗಿ ಅತ್ಯಾಚಾರಿಗಳು ಜೈಲಿನಿಂದ ಬಿಡುಗಡೆಯಾಗಿ ಹೊರಬಂದ ವೇಳೆ ಹಿಂದೂ ಸಂಘಟನೆ ಸದಸ್ಯರು ಅವರನ್ನು ವೀರರಂತೆ ಹಾರ ಹಾಕಿ ಸ್ವಾಗತಿಸುತ್ತಿರುವ ಚಿತ್ರ ವೈರಲ್ ಆಗಿ ಅಪಾರ ಟೀಕೆಗಳು ಕೇಳಿಬಂದಿದ್ದವು. 

ಗುಜರಾತ್ ಸರ್ಕಾರವು 1992 ರ ಪರಿಹಾರ ನೀತಿಯ ಅಡಿಯಲ್ಲಿ ಬಿಡುಗಡೆ ಮಾಡಲು ಪರಿಗಣಿಸಬಹುದು ಎಂದು ಅಪರಾಧಿಗಳಲ್ಲಿ ಒಬ್ಬನ ಅರ್ಜಿಯ ಮೇರೆಗೆ ಸುಪ್ರೀಂ ಕೋರ್ಟ್ ಹೇಳಿತ್ತು. ಆ ತೀರ್ಪಿನ ಆಧಾರದ ಮೇಲೆ ಗುಜರಾತ್ ಸರ್ಕಾರ ಎಲ್ಲಾ 11 ಮಂದಿಯನ್ನು ಬಿಡುಗಡೆ ಮಾಡಿತ್ತು. ಕೇಂದ್ರವು ಬಿಡುಗಡೆ ಪ್ರಕ್ರಿಯೆಯನ್ನು ತ್ವರಿತವಾಗಿ ಮಾಡಿತ್ತು. ತ್ವರಿತಗೊಳಿಸಿದ್ದರಿಂದ ಅಪರಾಧಿಗಳಿಗೆ ಬೇಗ ಬಿಡುಗಡೆ ಭಾಗ್ಯ ಸಿಕ್ಕಿತ್ತು. ಅತ್ಯಾಚಾರ ಮತ್ತು ಕೊಲೆ ಅಪರಾಧಿಗಳ ಬಿಡುಗಡೆಯನ್ನು ನಿರ್ಬಂಧಿಸುವ 2014 ರ ಉಪಶಮನ ನೀತಿಯನ್ನು ಗುಜರಾತ್ ಸರ್ಕಾರ ಅನುಸರಿಸಿದ್ದರೆ ಅದು ಸಾಧ್ಯವಾಗುತ್ತಿರಲಿಲ್ಲ.

ಅಪರಾಧಿಗಳನ್ನು ಬಿಡುಗಡೆ ಮಾಡುವ ಬಗ್ಗೆ ಮಹಾರಾಷ್ಟ್ರ ಸರ್ಕಾರ ತೀರ್ಮಾನಿಸಬೇಕಿತ್ತೇ ಹೊರತು ಗುಜರಾತ್ ಅಲ್ಲ ಎಂದು ಬಿಲ್ಕಿಸ್ ಬಾನೋ ತನ್ನ ಅರ್ಜಿಯಲ್ಲಿ ಹೇಳಿದ್ದಾರೆ. 

2002ರಲ್ಲಿ ನಡೆದ ಗೋಧ್ರಾ ರೈಲಿಗೆ ಬೆಂಕಿ ಹಚ್ಚಿದ್ದ ವೇಳೆ ಸಜೀವ ದಹನಗೊಂಡವರಲ್ಲಿ 59 ಮಂದಿ ಯಾತ್ರಾರ್ಥಿಗಳು ಒಳಗೊಂಡಿದ್ದರು. ಆ ಸಂದರ್ಭದಲ್ಲಿ ಅತ್ಯಾಚಾರಕ್ಕೀಡಾದ ಬಿಲ್ಕಿಸ್ ಬಾನೋಗೆ ಕೇವಲ 21 ವರ್ಷ. ಹತ್ಯಾಕಾಂಡದಲ್ಲಿ ಅವರ ಮೂರು ವರ್ಷದ ಮಗಳು ಸೇರಿದಂತೆ ಕುಟುಂಬದ ಒಂಬತ್ತು ಮಂದಿ ಬಲಿಯಾಗಿದ್ದರು. 

SCROLL FOR NEXT