ದೇಶ

ಮಾತೃಭಾಷೆಯಲ್ಲಿ ಶಿಕ್ಷಣ ನೀಡುವುದರಿಂದ ಇಂಗ್ಲಿಷ್ ಬಾರದ ವಿದ್ಯಾರ್ಥಿಗಳ ಪ್ರತಿಭೆ ಬಳಸಿಕೊಳ್ಳಬಹುದು: ಅಮಿತ್ ಶಾ

Ramyashree GN

ಅಹಮದಾಬಾದ್: ರಾಜ್ಯಗಳು ಹಿಂದಿ ಅಥವಾ ಪ್ರಾದೇಶಿಕ ಭಾಷೆಗಳಲ್ಲಿ ತಾಂತ್ರಿಕ, ವೈದ್ಯಕೀಯ ಮತ್ತು ಕಾನೂನು ಕ್ಷೇತ್ರಗಳಲ್ಲಿ ಶಿಕ್ಷಣವನ್ನು ಉತ್ತೇಜಿಸಬೇಕು. ಇದರಿಂದ ದೇಶವು ಇಂಗ್ಲಿಷ್ ಬಾರದ ವಿದ್ಯಾರ್ಥಿಗಳ ಪ್ರತಿಭೆಯನ್ನು ಬಳಸಿಕೊಳ್ಳಬಹುದು ಎಂದು ಬಿಜೆಪಿಯ ಹಿರಿಯ ನಾಯಕ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಒತ್ತಿ ಹೇಳಿದರು.

ಹಿಂದಿ ಮತ್ತು ಪ್ರಾದೇಶಿಕ ಭಾಷೆಗಳಲ್ಲಿ ಶಿಕ್ಷಣದ ಪ್ರಾಮುಖ್ಯತೆಯನ್ನು ಒತ್ತಿಹೇಳಿದ ಅವರು, ವಿದ್ಯಾರ್ಥಿಗಳು ತಮ್ಮ ಮಾತೃಭಾಷೆಯಲ್ಲಿ ಅಧ್ಯಯನ ಮಾಡಿದರೆ ಮೂಲ ಆಲೋಚನಾ ಪ್ರಕ್ರಿಯೆಯನ್ನು ಸುಲಭವಾಗಿ ಅಭಿವೃದ್ಧಿಪಡಿಸಬಹುದು ಮತ್ತು ಇದು ಸಂಶೋಧನೆ ಹಾಗೂ ಆವಿಷ್ಕಾರವನ್ನು ಉತ್ತೇಜಿಸುತ್ತದೆ ಎಂದು ಹೇಳಿದರು.

ತಾಂತ್ರಿಕ, ವೈದ್ಯಕೀಯ ಮತ್ತು ಕಾನೂನು ಶಿಕ್ಷಣವನ್ನು ಹಿಂದಿ ಮತ್ತು ಪ್ರಾದೇಶಿಕ ಭಾಷೆಗಳಲ್ಲಿ ಕಲಿಸಬೇಕು. ಈ ಮೂರು ಶಿಕ್ಷಣ ಕ್ಷೇತ್ರಗಳ ಪಠ್ಯಕ್ರಮವನ್ನು ಪ್ರಾದೇಶಿಕ ಭಾಷೆಗಳಿಗೆ ಸರಿಯಾಗಿ ಭಾಷಾಂತರಿಸಲು ಎಲ್ಲಾ ರಾಜ್ಯ ಸರ್ಕಾರಗಳು ಕ್ರಮ ಕೈಗೊಳ್ಳಬೇಕು. ಮಾತೃಭಾಷೆಯಲ್ಲಿ ಶಿಕ್ಷಣವು ಸುಲಭ ಮತ್ತು ವೇಗವಾಗಿದ್ದು, ಇದು ಉನ್ನತ ಶಿಕ್ಷಣದಲ್ಲಿ ದೇಶದ ಪ್ರತಿಭೆಗಳನ್ನು ಉತ್ತೇಜಿಸುತ್ತದೆ ಎಂದು ಶಾ ಸುದ್ದಿಸಂಸ್ಥೆ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದರು.

ಇಂದು ನಾವು ದೇಶದ ಐದು ಪ್ರತಿಶತ ಪ್ರತಿಭೆಯನ್ನು ಮಾತ್ರ ಬಳಸಿಕೊಳ್ಳುತ್ತಿದ್ದೇವೆ. ಆದರೆ, ಈ ಉಪಕ್ರಮದಿಂದ ನಾವು ದೇಶದ ಶೇ 100ರಷ್ಟು ಪ್ರತಿಭೆಗಳನ್ನು ಬಳಸಲು ಸಾಧ್ಯವಾಗುತ್ತದೆ. ಈಗ ಬಳಕೆಯಾಗುತ್ತಿರುವ ಶೇ ಐದರಷ್ಟು ಪ್ರತಿಭೆಗಳು ಇಂಗ್ಲಿಷ್ ಹಿನ್ನೆಲೆಯಿಂದ ಬಂದವುಗಳಾಗಿವೆ. ಆದರೆ, ಒಂದು ಭಾಷೆಯಾಗಿ ಇಂಗ್ಲಿಷ್ ವಿರುದ್ಧ ತನಗೇನೂ ಇಲ್ಲ ಎಂದು ಅವರು ಹೇಳಿದರು.

ಇದು ವಿದ್ಯಾರ್ಥಿಯ 'ಮೌಲಿಕ್ ಚಿಂತನ್' (ಮೂಲ ಚಿಂತನೆ) ಅನ್ನು ಆತನ ಮಾತೃಭಾಷೆಯಲ್ಲಿಯೇ ಸುಲಭವಾಗಿ ಅಭಿವೃದ್ಧಿಪಡಿಸಬಹುದು ಮತ್ತು ಮೌಲಿಕ್ ಚಿಂತನ್ ಮತ್ತು ಅನುಸಂಧಾನ (ಸಂಶೋಧನೆ) ನಡುವೆ ಬಲವಾದ ಸಂಪರ್ಕವಿದೆ ಎಂದು ಶಾ ಹೇಳಿದರು.

ಇತಿಹಾಸ ಶಿಕ್ಷಣದ ಕುರಿತು ತಮ್ಮ ಅವಲೋಕನಗಳ ಕುರಿತು ಮಾತನಾಡುತ್ತಾ, ಭಾರತದಲ್ಲಿ ಆಳ್ವಿಕೆ ನಡೆಸಿದ ಮತ್ತು ಉತ್ತಮ ಆಡಳಿತದ ಮಾದರಿಯನ್ನು ಸ್ಥಾಪಿಸಿದ ಮೂವತ್ತು ಸಾಮ್ರಾಜ್ಯಗಳ 300 ಜನ ನಾಯಕರ ಬಗ್ಗೆ ಅಧ್ಯಯನ ಮಾಡಲು ವಿದ್ಯಾರ್ಥಿಗಳಿಗೆ ಮನವಿ ಮಾಡಿದ ಅವರು, ನಮ್ಮ ಇತಿಹಾಸ ಮತ್ತು ಅದರಲ್ಲಿನ ವಿರೂಪಗಳ ಬಗ್ಗೆ ಇತರರು ಏನು ಬರೆದಿದ್ದಾರೆ ಎಂದು ನಾವು ಎಲ್ಲಿಯವರೆಗೆ ಹೇಳುತ್ತೇವೆ ಮತ್ತು ಅಳುತ್ತೇವೆ. ನಮ್ಮ ದೇಶದ ವಿದ್ಯಾರ್ಥಿಗಳು ನಮ್ಮ ನಿಜವಾದ ಇತಿಹಾಸವನ್ನು ಸಂಶೋಧಿಸಬೇಕು ಎಂದರು.

SCROLL FOR NEXT