ದೇಶ

ಉತ್ತರ ಪ್ರದೇಶದಲ್ಲಿ ಭೀಕರ ಅಪಘಾತ; ಹಳ್ಳಕ್ಕೆ ಉರುಳಿದ ಟ್ರಾಕ್ಟರ್, ಕನಿಷ್ಠ 26 ಮಂದಿ ಸಾವು

Srinivasamurthy VN

ಕಾನ್ಪುರ: ಉತ್ತರಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಪ್ರಯಾಣಿಕರ ತುಂಬಿದ್ದ ಟ್ರಾಕ್ಟರ್ ಹಳ್ಳಕ್ಕೆ ಉರುಳಿ ಬಿದ್ದ ಪರಿಣಾಮ ಕನಿಷ್ಟ 26 ಮಂದಿ ಭಕ್ತರು ಸಾವನ್ನಪ್ಪಿದ್ದಾರೆ.

ಕಾನ್ಪುರ ಜಿಲ್ಲೆಯ ಘಟಂಪುರ ಪ್ರದೇಶದಲ್ಲಿ ಶನಿವಾರ ಟ್ರ್ಯಾಕ್ಟರ್‌ ಟ್ರಾಲಿ ಪಲ್ಟಿಯಾಗಿದ್ದು, ಟ್ರಾಕ್ಟರ್ ನಲ್ಲಿದ್ದ 25 ಭಕ್ತರು ಸಾವನ್ನಪ್ಪಿದ್ದಾರೆ. ಅಂತಯೇ ಹಲವರ ಸ್ಥಿತಿ ಚಿಂತಾಜನಕವಾಗಿದೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.

50 ಜನರಿದ್ದ ಟ್ರ್ಯಾಕ್ಟರ್ ಉನ್ನಾವೊದ ಚಂದ್ರಿಕಾ ದೇವಿ ದೇವಸ್ಥಾನದಿಂದ ವಾಪಸಾಗುತ್ತಿದ್ದಾಗ ಕಾನ್ಪುರದ ಘಟಂಪುರ ಪ್ರದೇಶದಲ್ಲಿ ಅಪಘಾತಕ್ಕೀಡಾಗಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪೊಲೀಸರು ಹಾಗೂ ಸ್ಥಳೀಯರು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.

ಮುಖ್ಯಮಂತ್ರಿ ಯೋಗಿ ಆದಿತ್ಯಂತ್ ಕೂಡ ಪ್ರಾಣಹಾನಿಗೆ ಸಂತಾಪ ಸೂಚಿಸಿದ್ದು, ಹಿರಿಯ ಸಚಿವರಾದ ರಾಕೇಶ್ ಸಚನ್ ಮತ್ತು ಅಜಿತ್ ಪಾಲ್ ಅವರನ್ನು ಅಪಘಾತ ಸ್ಥಳಕ್ಕೆ ಕಳುಹಿಸಿ ಪರಿಹಾರ ಮತ್ತು ರಕ್ಷಣಾ ಕ್ರಮಗಳ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಘಟನೆಯ ನಂತರ, ಮುಖ್ಯಮಂತ್ರಿಗಳು ಸಾರಿಗೆ ಉದ್ದೇಶಗಳಿಗಾಗಿ ಟ್ರ್ಯಾಕ್ಟರ್ ಟ್ರಾಲಿಯನ್ನು ಬಳಸದಂತೆ ಜನರಿಗೆ ಮನವಿ ಮಾಡಿದ್ದಾರೆ. ಟ್ರ್ಯಾಕ್ಟರ್ ಟ್ರಾಲಿಯನ್ನು ಕೃಷಿ ಕೆಲಸಗಳಿಗೆ ಮತ್ತು ಸರಕುಗಳನ್ನು ವರ್ಗಾಯಿಸಲು ಬಳಸಲಾಗುತ್ತದೆ ಎಂದು ಅವರು ಹೇಳಿದರು.

ಮುಖ್ಯಮಂತ್ರಿಗಳು ರಕ್ಷಣಾ ಕಾರ್ಯಾಚರಣೆಯನ್ನು ವೈಯಕ್ತಿಕವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದು ಸರ್ಕಾರದ ವಕ್ತಾರರು ತಿಳಿಸಿದ್ದಾರೆ.

ಇನ್ನು ಘಟನೆಗೆ ಸಂತಾಪ ಸೂಚಿಸಿರುವ ಪ್ರಧಾನಿ ನರೇಂದ್ರ ಮೋದಿ, ಅಪಘಾತದಲ್ಲಿ ಸದಸ್ಯರನ್ನು ಕಳೆದುಕೊಂಡ ಕುಟುಂಬಗಳಿಗೆ 2 ಲಕ್ಷ ಪರಿಹಾರ ಘೋಷಿಸಿದ್ದಾರೆ. ಗಾಯಗೊಂಡವರಿಗೆ 50,000 ಧನಸಹಾಯ ನೀಡಲಾಗುವುದು ಎಂದು ಹೇಳಿದ್ದಾರೆ.
 

SCROLL FOR NEXT