ದೇಶ

ಮಧ್ಯ ಪ್ರದೇಶ: ಫಲ ಕೊಡದ 'ಸತ್ಯ ನಾರಾಯಣ ಪೂಜೆ'; ಸಿಟ್ಟಿಗೆದ್ದ ಅಪ್ಪ-ಮಕ್ಕಳಿಂದ ಅರ್ಚಕರಿಗೆ ಥಳಿತ

Ramyashree GN

ಇಂದೋರ್: ಮಧ್ಯಪ್ರದೇಶದ ಇಂದೋರ್‌ನಲ್ಲಿ ಅರ್ಚಕರೊಬ್ಬರು 'ಸತ್ಯನಾರಾಯಣ ಪೂಜೆ'ಯ ಸಮಯದಲ್ಲಿ ಮಾಡಿದ ಧಾರ್ಮಿಕ ಕ್ರಿಯೆಗಳು ತಪ್ಪು ಫಲಿತಾಂಶಗಳಿಗೆ ಕಾರಣವಾಗಿವೆ ಎಂಬ ಶಂಕೆಯ ಮೇಲೆ ಅಪ್ಪ-ಮಗ ಅವರನ್ನು ಥಳಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.

ರಾಜಸ್ಥಾನದ ಕೋಟಾ ನಿವಾಸಿಯಾಗಿರುವ ಅರ್ಚಕ ಕುಂಜ್‌ಬಿಹಾರಿ ಶರ್ಮಾ ಅವರನ್ನು ಪೂಜೆಯನ್ನು ಆಯೋಜಿಸಿದ್ದವರು ಮತ್ತು ಅವರ ಇಬ್ಬರು ಪುತ್ರರು ಗುರುವಾರ ರಾತ್ರಿ ಥಳಿಸಿದ್ದಾರೆ ಎಂದು ಚಂದನನಗರ ಪೊಲೀಸ್ ಠಾಣೆ ಪ್ರಭಾರಿ ಅಭಯ್ ನೇಮಾ ಪಿಟಿಐಗೆ ತಿಳಿಸಿದ್ದಾರೆ.

ಇಲ್ಲಿನ ಸ್ಕೀಮ್ ನಂಬರ್ 71 ರ ನಿವಾಸಿಗಳು ಗಾಯಗೊಂಡಿದ್ದ ಅರ್ಚಕರನ್ನು ಪೊಲೀಸ್ ಠಾಣೆಗೆ ಕರೆತಂದಿದ್ದಾರೆ.

ಲಕ್ಷ್ಮಿಕಾಂತ್ ಶರ್ಮಾ ಅವರ ಮನೆಯಲ್ಲಿ ಧಾರ್ಮಿಕ ಕ್ರಿಯೆಗಳನ್ನು ನಡೆಸಲು ಆಹ್ವಾನಿಸಲಾಯಿತು ಮತ್ತು ಕಾರ್ಯಕ್ರಮ ಮುಗಿದ ನಂತರ ನಾನು ಮನೆಗೆ ತೆರಳಿದೆ. ಆದರೆ, ತಡರಾತ್ರಿ ಲಕ್ಷ್ಮೀಕಾಂತ್ ಮತ್ತು ಅವರ ಪುತ್ರರಾದ ವಿಫುಲ್ ಹಾಗೂ ಅರುಣ್ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು 60 ವರ್ಷದ ಅರ್ಚಕರು ತಿಳಿಸಿದ್ದಾರೆ.

ಅರ್ಚಕರು ತಪ್ಪಾದ ರೀತಿಯಲ್ಲಿ ಧಾರ್ಮಿಕ ಕ್ರಿಯೆಗಳನ್ನು ನಡೆಸಿದ ನಂತರ ಅರುಣ್ ವಿಲಕ್ಷಣವಾಗಿ ವರ್ತಿಸಲು ಪ್ರಾರಂಭಿಸಿದ ಎಂದು ದಾಳಿಕೋರರು ತಿಳಿಸಿರುವುದಾಗಿ ಅಧಿಕಾರಿ ತಿಳಿಸಿದ್ದಾರೆ.
ಸದ್ಯ, ಲಕ್ಷ್ಮೀಕಾಂತ್ ಶರ್ಮಾ ಮತ್ತು ಅವರ ಮಕ್ಕಳಾದ ವಿಪುಲ್ ಮತ್ತು ಅರುಣ್ ಅವರನ್ನು ಬಂಧಿಸಲಾಗಿದೆ ಎಂದು ನೇಮಾ ಹೇಳಿದರು.

ಅರುಣ್‌ಗೆ ಮದುವೆಗೆ ಸೂಕ್ತ ಹೊಂದಾಣಿಕೆ ಸಿಗದ ಕಾರಣ ಪೂಜೆ ನಡೆಸಲಾಗಿದೆ ಎಂದು ನೆರೆಹೊರೆಯವರು ತಿಳಿಸಿದ್ದಾರೆ.

SCROLL FOR NEXT