ದೇಶ

ಗುಜರಾತ್ ನಲ್ಲಿ “ಜೈ ಶ್ರೀ ರಾಮ್” ಘೋಷಣೆ ಕೂಗುವ ಮೂಲಕ ಬಿಜೆಪಿಗೆ ಡಿಚ್ಚಿ ಕೊಟ್ಟ ಕೇಜ್ರಿವಾಲ್

Lingaraj Badiger

ವಡೋದರಾ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಶನಿವಾರ ಗುಜರಾತ್‌ನ ವಡೋದರಾದಲ್ಲಿ ಆಮ್ ಆದ್ಮಿ ಪಕ್ಷದ ಕಾರ್ಯಕ್ರಮದಲ್ಲಿ “ಜೈ ಶ್ರೀ ರಾಮ್” ಎಂದು ಘೋಷಣೆ ಕೂಗುವ ಮೂಲಕ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.

ಬಿಜೆಪಿಯನ್ನು ಗುರಿಯಾಗಿಸಿ ಮಾತನಾಡಿದ ಆಪ್‌ನ ರಾಷ್ಟ್ರೀಯ ಸಂಚಾಲಕ ಕೇಜ್ರಿವಾಲ್ ಅವರು, ಅವರು ನನ್ನ ಬಗ್ಗೆ ಕೆಟ್ಟ ಮಾತುಗಳನ್ನು ಹೇಳುತ್ತಿದ್ದಾರೆ. ನಾನು ಹೆದರುವುದಿಲ್ಲ. ಆದರೆ ಅವರು ನನ್ನನ್ನು ದ್ವೇಷಿಸುತ್ತಾರೆ ಮತ್ತು ಅವರು ದ್ವೇಷದಲ್ಲಿ ಕುರುಡರಾಗಿದ್ದಾರೆ, ಅವರು ದೇವರನ್ನು ಸಹ ಅವಮಾನಿಸುತ್ತಿದ್ದಾರೆ” ಎಂದು ಹೇಳಿದರು.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇಂದು ಗುಜರಾತ್‌ನ ವಡೋದರಾದಲ್ಲಿ ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದರು. ತಿರಂಗ ರ್ಯಾಲಿಯಲ್ಲಿ ಕೇಜ್ರಿವಾಲ್ ಹಿಂದೂ ಪೌರಾಣಿಕ ಉಲ್ಲೇಖಗಳನ್ನು ತೆಗೆದುಕೊಂಡು ಬಿಜೆಪಿ ದೇವರನ್ನು ಅವಮಾನಿಸುತ್ತದೆ ಎಂದು ಆರೋಪಿಸಿದರು. ಅಲ್ಲದೆ ತಮ್ಮನ್ನು ತಾವು ನಿಷ್ಠಾವಂತ ಭಕ್ತ ಎಂದು ಕರೆದುಕೊಳ್ಳುತ್ತಲೇ “ಜೈ ಶ್ರೀ ರಾಮ್” ಮತ್ತು “ಜೈ ಶ್ರೀ ಕೃಷ್ಣ” ಎಂಬ ಘೋಷಣೆಗಳನ್ನು ಕೂಗಿದರು.

ಕೇಜ್ರಿವಾಲ್ ರ್ಯಾಲಿಗೂ ಮುನ್ನ ಆಪ್ ಕಾರ್ಯಕರ್ತರು ಎಎಪಿ ವಿರೋಧಿ ಪೋಸ್ಟರ್ ಗಳನ್ನು ತೆಗೆದುಹಾಕಿದ್ದರು. ಪಕ್ಷದ ಮುಖ್ಯಸ್ಥರು ರ್ಯಾಲಿ ಸ್ಥಳಕ್ಕೆ ತೆರಳುವ ಮಾರ್ಗದಲ್ಲಿ ಹಾಕಲಾಗಿದ್ದ ಎಎಪಿ ವಿರೋಧಿ ಪೋಸ್ಟರ್‌ಗಳು ಮತ್ತು ಬ್ಯಾನರ್‌ಗಳನ್ನು ಕಾರ್ಯಕರ್ತರು ತೆರವುಗೊಳಿಸಿದ್ದರು. 

ದೆಹಲಿ ಸಮಾಜ ಕಲ್ಯಾಣ ಸಚಿವ ರಾಜೇಂದ್ರ ಪಾಲ್ ಗೌತಮ್ ಅವರ ಹಿಂದೂ ವಿರೋಧಿ ಹೇಳಿಕೆಗಳನ್ನು ವಿರೋಧಿಸಿ ಗುಜರಾತ್‌ನ ವಡೋದರದಲ್ಲಿ ಆಡಳಿತಾರೂಢ ಬಿಜೆಪಿ ಬೆಂಬಲಿಗರು ಇಂದಿನ ರ್ಯಾಲಿಗೂ ಮುನ್ನ ಎಎಪಿ ಬ್ಯಾನರ್‌ಗಳನ್ನು ಹರಿದು ಹಾಕಿದ್ದರು.

ಧಾರ್ಮಿಕ ಮತಾಂತರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ದೆಹಲಿ ಸಚಿವ ರಾಜೇಂದ್ರ ಪಾಲ್ ಗೌತಮ್ ಅವರು ಹಿಂದೂ ದೇವತೆಗಳನ್ನು ನಿಂದಿಸಿದ್ದಾರೆ ಎಂದು ಹೇಳಲಾದ ವೀಡಿಯೊ ವೈರಲ್ ಆಗಿತ್ತು. ಘಟನೆಯ ನಂತರ ಬಿಜೆಪಿ, ಕೇಜ್ರಿವಾಲ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ ಸಚಿವ ಗೌತಮ್ ಅವರನ್ನು ವಜಾಗೊಳಿಸುವಂತೆ ಒತ್ತಾಯಿಸಿತ್ತು.

SCROLL FOR NEXT