ದೇಶ

ಛತ್ತೀಸಗಢ: ಮಕ್ಕಳ ಕಳ್ಳನೆಂದು ಶಂಕಿಸಿ ಮಾನಸಿಕ ಅಸ್ವಸ್ಥನೊಬ್ಬನಿಗೆ ಥಳಿಸಿದ ಗ್ರಾಮಸ್ಥರು, ಮೂವರ ಬಂಧನ

Ramyashree GN

ದುರ್ಗ್: ಛತ್ತೀಸಗಢದ ದುರ್ಗ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಮಕ್ಕಳ ಕಳ್ಳನೆಂದು ಶಂಕಿಸಿ ಮಾನಸಿಕ ಅಸ್ವಸ್ಥ ವ್ಯಕ್ತಿಯೊಬ್ಬರನ್ನು ಗುಂಪೊಂದು ಥಳಿಸಿರುವ ಘಟನೆ ಶನಿವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆದಾಗ್ಯೂ, ಘಟನೆಯಲ್ಲಿ ಸಂತ್ರಸ್ತರಿಗೆ ಗಾಯಗಳಾಗಿಲ್ಲ ಮತ್ತು ಪೊಲೀಸರು ಸಮಯಕ್ಕೆ ಸರಿಯಾಗಿ ಬಂದು ಉಳಿಸಿದ್ದಾರೆ. ನಂತರ ಅವರನ್ನು ಮಾನಸಿಕ ಅಸ್ವಸ್ಥರಿಗಾಗಿಯೇ ಇರುವ ಬಿಲಾಸ್‌ಪುರ ಮೂಲದ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಹೇಳಿದರು.

ಉತೈ ಪೊಲೀಸ್ ಠಾಣಾ ವ್ಯಾಪ್ತಿಯ ಖೋಪ್ಲಿ ಗ್ರಾಮದಲ್ಲಿ ಶುಕ್ರವಾರ ಸಂಜೆ ನಡೆದ ಘಟನೆಗೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ. ಗ್ರಾಮದಲ್ಲಿ ಮೊದಲ ಬಾರಿಗೆ ಸಂತ್ರಸ್ತನನ್ನು ನೋಡಿದ ನಂತರ ಕೆಲವು ಮಹಿಳೆಯರು ಮತ್ತು ಮಕ್ಕಳು ಅನುಮಾನ ವ್ಯಕ್ತಪಡಿಸಿದ್ದಾರೆ. ನಂತರ ಗ್ರಾಮಸ್ಥರು ಆತನ ಮೇಲೆ ಹಲ್ಲೆ ಮಾಡಲು ಪ್ರಾರಂಭಿಸಿದ್ದಾರೆ ಎಂದು ದುರ್ಗ್ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಪಲ್ಲವ ತಿಳಿಸಿದ್ದಾರೆ.

'ಮಾನಸಿಕ ಅಸ್ವಸ್ಥ ವ್ಯಕ್ತಿಯೊಬ್ಬರು ಈ ಪ್ರದೇಶದಲ್ಲಿ ತಿರುಗಾಡುತ್ತಿದ್ದಾರೆ ಎಂದು ಪೊಲೀಸರಿಗೆ ಮೊದಲೇ ಮಾಹಿತಿ ನೀಡಿದ್ದರಿಂದ, ಪೊಲೀಸರ ತಂಡ ಸ್ಥಳಕ್ಕೆ ಆಗಮಿಸಿ ಆತನನ್ನು ರಕ್ಷಿಸಿದೆ' ಎಂದು ಅವರು ಹೇಳಿದರು.

ಮೊದಲಿಗೆ ಆತನನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದು, ಅಲ್ಲಿ ಯಾವುದೇ ಗಾಯದ ಗುರುತುಗಳಿಲ್ಲ ಎಂದು ವೈದ್ಯರು ಖಚಿತಪಡಿಸಿದರು. ನಂತರ, ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಅನುಮತಿಯೊಂದಿಗೆ ಸಂತ್ರಸ್ತನನ್ನು ಬಿಲಾಸ್‌ಪುರದ ಸೆಂದ್ರಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು ಎಂದು ಅವರು ಹೇಳಿದರು.

ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಖೋಪ್ಲಿ ನಿವಾಸಿಗಳಾದ ಭೋಲಾ ಚಂದ್ರಾಕರ್ (37), ವಿಕಾಸ್ ಬಂಜಾರೆ (20) ಮತ್ತು ಕರಣ್ ನಾರಂಗ್ (30) ಎಂಬುವರನ್ನು ಅವರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಬಂಧಿಸಲಾಗಿದೆ. ಮುಂದಿನ ತನಿಖೆ ನಡೆಯುತ್ತಿದೆ ಎಂದು ಪಲ್ಲವ ತಿಳಿಸಿದ್ದಾರೆ.

ಎರಡು ದಿನಗಳ ಮುನ್ನ ಮಕ್ಕಳನ್ನು ಅಪಹರಿಸುವ ಗ್ಯಾಂಗ್‌ನ ಸದಸ್ಯರು ಎಂದು ಜನರು ಸಾಧುಗಳಂತೆ ವೇಷಧರಿಸಿದ್ದ ಶಂಕಿತ ಮೂವರನ್ನು ಜನರ ಗುಂಪೊಂದು ಜಿಲ್ಲೆಯ ಚರೋಡಾ ಪಟ್ಟಣದಲ್ಲಿ ಥಳಿಸಿತ್ತು. ಈ ಸಂಬಂಧ 14 ಮಂದಿಯನ್ನು ಬಂಧಿಸಲಾಗಿದೆ.

ಮಕ್ಕಳನ್ನು ಅಪಹರಿಸುವವರು ಬಂದಿದ್ದಾರೆ ಎನ್ನುವ ವದಂತಿಗಳಿಗೆ ಹಿಂಸಾತ್ಮಕ ರೀತಿಯಲ್ಲಿ ಪ್ರತಿಕ್ರಿಯಿಸಬೇಡಿ ಎಂದು ದುರ್ಗ್ ಪೊಲೀಸರು ಜನರಿಗೆ ಮನವಿ ಮಾಡಿದ್ದಾರೆ.

SCROLL FOR NEXT